ರಥಸಪ್ತಮಿ ಆಚರಣೆ-೧೦೮ ಸೂರ್ಯ ನಮಸ್ಕಾರ

ವಿಜಯಪುರ.ಜ೨೬:ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ಸೌಪರ್ಣಿಕಾ ವಲಯದ ವತಿಯಿಂದ ಭಾನುವಾರ ಬೆಳಿಗ್ಗೆ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿತ್ತು.


ಬೆಳಿಗ್ಗೆ ೫:೧೫ಕ್ಕೆ ಸರಿಯಾಗಿ ಏಕಾತ್ಮಕ ಸೂತ್ರದ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನೂರಾರು ಯೋಗ ಶಿಕ್ಷಣಾರ್ಥಿಗಳು ಒಗ್ಗೂಡಿ ಸೂರ್ಯನಿಗೆ ೧೦೮ ಸೂರ್ಯನಮಸ್ಕಾರಗಳನ್ನು ಅರ್ಪಿಸುವ ಮೂಲಕ ಆರೋಗ್ಯ ಮತ್ತು ಆಧ್ಯಾತ್ಮದ ಸಂದೇಶ ಸಾರಿದರು.


ರಥಸಪ್ತಮಿಯ ಮಹತ್ವ: ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಸೌಪರ್ಣಿಕಾ ವಲಯದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಹಿಳಾ ಪ್ರಾಂತ್ಯ ಮುಖ್ಯಸ್ಥರಾದ ದೀಪಾ ರಮೇಶ್ ಅವರು, “ಸೂರ್ಯನು ಜಗತ್ತಿನ ಆರೋಗ್ಯದ ಮೂಲ. ರಥಸಪ್ತಮಿಯ ಈ ಶುಭ ದಿನದಂದು ಸೂರ್ಯನಮಸ್ಕಾರ ಮಾಡುವುದರಿಂದ ದೈಹಿಕ ಶಕ್ತಿ ವೃದ್ಧಿಸುವುದಲ್ಲದೆ, ಮಾನಸಿಕ ಶಾಂತಿ ಲಭಿಸುತ್ತದೆ. ಯೋಗ ಮತ್ತು ಪ್ರಾಣಾಯಾಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು,” ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಭಾರತಿ ಪ್ರಭುದೇವ್, ವಿಜಯ ಶಿವಕುಮಾರ್, ಭಾರತಿ ಜಗದೀಶ್, ರಮೇಶ್, ರಾಘವೇಂದ್ರ, ಕಾರ್ತಿಕ್, ಬಿ.ಸಿ. ಸಿದ್ದರಾಜು, ಬೆಸ್ಕಾಂನ ಕೆ. ವಿಶ್ವಾಸ್, ನಿರ್ಮಲಾ ಶೇಖರ್, ಅನ್ನಪೂರ್ಣ ಕೃಷ್ಣಕುಮಾರ್ ಸೇರಿದಂತೆ ಹಲವಾರು ಯೋಗ ಶಿಕ್ಷಣಾರ್ಥಿಗಳು, ಭಕ್ತಾದಿಗಳು ಭಾಗವಹಿಸಿದ್ದರು.