
ಬೀದರ್ ಸೆ. 08:ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ತಳವಾರ ಸಮಾಜದ 17 ವರ್ಷದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ಟೋಕ್ರೆ ಕೋಳಿ ಸಮಾಜ ನವದೆಹಲಿ (ರಿ.) ಹುಮನಾಬಾದ್ ತಾಲೂಕು ಯುವ ಘಟಕ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಹುಮನಾಬಾದ ತಹಸಿಲ್ದಾರರಿಗೆ ಸಲ್ಲಿಸಿರುವ ಸಂಘಟನೆಯ ಪದಾಧಿಕಾರಿಗಳು, ಸುಮಾರು ಐದು ಮಂದಿ ಸೇರಿಕೊಂಡು ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ. ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳನ್ನು ಕೂಡ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಇಂತಹ ದೌರ್ಜನ್ಯಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಶಿಕ್ಷೆ ಜರುಗಿಸುವುದರ ಜೊತೆಗೆ, ಮೃತಪಟ್ಟ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಟೋಕ್ರೆ ಕೋಳಿ ಸಮಾಜ ನವದೆಹಲಿ (ರಿ.) ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ ಹಣಕುಣಿ, ಹುಮನಾಬಾದ್ ತಾಲೂಕು ಘಟಕದ ಗೌವಾಧ್ಯಕ್ಷ ಅನೀಲ ಪಲ್ಲೇರಿ, ಅಧ್ಯಕ್ಷರಾದ ಶರಣು ಕಂದಗೂಳ್, ಯುವ ಘಟಕದ ಅಧ್ಯಕ್ಷರಾದ ದಯಾನಂದ ಮೇತ್ರಿ, ಉಪಾಧ್ಯಕ್ಷ ಸಿದ್ದಲಿಂಗ ಬಿ. ಅಯ್ಯಾನೋರೆ, ಪ್ರಧಾನ ಕಾರ್ಯದರ್ಶಿ ಲಖನ್ ಎಸ್. ಕೋಳಿವಾಡ, ಮುಖಂಡರಾದ ಚಂದ್ರಕಾಂತ ಜಮಾದಾರ್, ಶಂಕರ ಜಮಾದಾರ್ ಅವರು ಮನವಿ ಸಲ್ಲಿಸಿದ್ದಾರೆ.























