ರನ್ಯಾರಾವ್ ಬಂಧನ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು,ಡಿ.೨- ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಮಲಮಗಳು ನಟಿ ರನ್ಯಾ ರಾವ್ ಹಾಗೂ ತರುಣ್ ಕೊಂಡೋರು ರಾಜು ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆ ತಡೆ ಕಾಯಿದೆ (ಕಾಫಿಪೋಸಾ) ಅಡಿ ಬಂಧಿಸಿರುವುದು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.


ರನ್ಯಾ ಮಲತಾಯಿ ಹೆಚ್.ಎಸ್.ರೋಹಿಣಿ ಮತ್ತು ತರುಣ್ ತಾಯಿ ರಮಾ ರಾಜು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾ.ಅನು ಶಿವರಾಮನ್ ಮತ್ತು ನ್ಯಾ.ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.


ಈ ವೇಳೆ ರನ್ಯಾರಾವ್ ಪರ ವಕೀಲರು, ಬಂಧನ ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಡಿಆರ್‌ಐ ಪೆನ್ಡ್ರೈವ್ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೋ ದಾಖಲೆ) ಆಧರಿಸಿದೆ. ಆದರೆ, ಅದನ್ನು ರನ್ಯಾರಿಗೆ ಒದಗಿಸಿಲ್ಲ.


ರನ್ಯಾ ಅವರನ್ನು ವಶಕ್ಕೆ ಪಡೆದಾಗಲೇ ಪಾಸ್‌ಪೋರ್ಟ್ ಜಪ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹೀಗಿರುವಾಗ ರನ್ಯಾ ದೇಶ ತೊರೆಯುವ ಸಂದರ್ಭ ನಿರ್ಮಾಣವಾಗುವುದಿಲ್ಲ. ಆರೋಪಿಗೆ ತಿಳಿಯುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ರನ್ಯಾಗೆ ಕನ್ನಡದಲ್ಲಿ ಮುದ್ರಿಸಿರುವ ಎರಡು ಪುಟಗಳ ದಾಖಲೆಯನ್ನು ನೀಡಲಾಗಿದೆ. ಅದನ್ನು ಅವರಿಗೆ ಓದಲು ಆಗಿಲ್ಲ. ಇನ್ನು ಅಪೂರ್ಣವಾದ ದಾಖಲೆಯ ನಕಲನ್ನು ಒದಗಿಸಲಾಗಿದೆ ಎಂದು ವಾದಿಸಿದರು.


ತರುಣ್ ರಾಜು ಪರ ವಕೀಲರು, ಕಾಫಿಪೋಸಾ ಅಡಿ ಬಂಧನವೇ ಅಕ್ರಮವೆಂದು ಘೋಷಿಸುವಂತೆ ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರವು ಅದನ್ನು ಹೈಕೋರ್ಟ್‌ನ ಸಲಹಾ ಸಮಿತಿಗೆ ರವಾನಿಸಿ ಕೈಬಿಟ್ಟಿದೆ. ಇಲ್ಲಿ ಜಂಟಿ ಕಾರ್ಯದರ್ಶಿಯು ಪೋಸ್ಟ್‌ಮ್ಯಾನ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅರ್ಜಿದಾರ ದುಬೈನಲ್ಲಿ ರನ್ಯಾ ಜೊತೆ ವ್ಯವಹರಿಸಿದ್ದು, ಅಲ್ಲಿ ಮಾಡಿರುವ ಕೆಲಸಕ್ಕೆ ಅವರನ್ನು ಭಾರತದಲ್ಲಿ ಹೊಣೆ ಮಾಡಲಾಗದು ಎಂದರು.


ಕೇಂದ್ರ ಸರ್ಕಾರದ ಪರ ವಕೀಲರು, ರನ್ಯಾಗೆ ಪೆನ್ ಡ್ರೈವ್ ತಲುಪಿಸಲು ಎಲ್ಲ ಪ್ರಯತ್ನ ಮಾಡಲಾಗಿದೆ. ಆಕೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರಿಂದ ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್ ಸಾಧನವಾದ ಪೆನ್ ಡ್ರೈವ್ ನೀಡಿಲ್ಲ. ಬದಲಿಗೆ ಅವರು ಸೂಚಿಸಿದಂತೆ ಅವರ ವಕೀಲ ಶಾಶ್ವತ್ ಅವರಿಗೆ ನೀಡಲು ಪ್ರಯತ್ನಿಸಲಾಗಿತ್ತು. ಇದನ್ನು ಶಾಶ್ವತ್ ಸ್ವೀಕರಿಸದೇ ಇದ್ದುದರಿಂದ ಅಂತಿಮವಾಗಿ ರನ್ಯಾ ಸೂಚನೆಯ ಮೇರೆಗೆ ಅವರ ಮಲತಾಯಿ ರೋಹಿಣಿ ಅವರಿಗೆ ನೀಡಲಾಗಿದೆ. ಚಿನ್ನ ಕಳ್ಳ ಸಾಗಣೆಯಂಥ ಕೃತ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಅವರನ್ನು ಬಿಡುಗಡೆ ಮಾಡಬಾರದು ಎಂದು ಪೀಠಕ್ಕೆ ತಿಳಿಸಿದರು.


ಪ್ರಕರಣದ ವಿವರ:
ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಆರೋಪದಲ್ಲಿ ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿ ಏಪ್ರಿಲ್ ೨೨ರಂದು ಕಾಫಿಫೋಸಾ ಅಡಿ ರನ್ಯಾ, ತರುಣ್ ರಾಜು ಮತ್ತು ಮತ್ತೊಬ್ಬ ಆರೋಪಿ ಸಾಹಿಲ್ ಜೈನ್ ಅವರನ್ನು ಡಿಆರ್‌ಐ ವಶಕ್ಕೆ ಪಡೆದಿತ್ತು. ಇದನ್ನು ಅಕ್ರಮವೆಂದು ಘೋಷಿಸುವಂತೆ ಎಂದು ರನ್ಯಾ ಹಾಗೂ ತರುಣ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.