
ಬೀದರ್: ನ.12:ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಮಕ್ಕಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತು.
ಸಂಸತ್‍ನಲ್ಲಿ ಮಕ್ಕಳು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ವಿವಿಧ ಸಮಸ್ಯೆ ಪ್ರಸ್ತಾಪಿಸುವ ಜತೆಗೆ, ಅನೇಕ ಬೇಡಿಕೆಗಳನ್ನೂ ಮಂಡಿಸಿದರು.
ಮಕ್ಕಳಲ್ಲಿ ಗಂಡು-ಹೆಣ್ಣು, ಕನ್ನಡ-ಆಂಗ್ಲ ಮಾಧ್ಯಮ ತಾರತಮ್ಯ ಮಾಡಬಾರದು. ಆಟದ ಮೈದಾನ, ಪ್ರಯೋಗಾಲಯ ಸೇರಿದಂತೆ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಕಾಳಜಿ ವಹಿಸಬೇಕು. ಸಮಾಜವನ್ನು ಬಾಲ್ಯ ವಿವಾಹ ಮುಕ್ತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟರು. ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂಬ ಹಕ್ಕೊತ್ತಾಯ ಸಹ ಮಾಡಿದರು.
ಮಕ್ಕಳ ಸಂಸತ್‍ನಲ್ಲಿ ಪರಿಣಾಮಕಾರಿಯಾಗಿ ವಿಷಯ ಮಂಡಿಸಿದ ಕಮಠಾಣ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ರಾಣೆಮ್ಮ ಶಂಕರ ಹಾಗೂ ಬೀದರನ ಸಾಯಿ ಪ್ರೌಢಶಾಲೆಯ ನಿತಿನ್ ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ಸಂಸತ್‍ಗೆ ಚಾಲನೆ ನೀಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸೀಮಪ್ಪ ಬಿ. ಸರಕುರೆ ಅವರು, ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಆಗುತ್ತಿದೆ. ಮಕ್ಕಳನ್ನು ಮೊಬೈಲ್‍ನಿಂದ ದೂರ ಇರಿಸಬೇಕು ಎಂದು ಹೇಳಿದರು.
ಅರಳು ಸಂಸ್ಥೆಯ ಅಧ್ಯಕ್ಷ ಕೆ.ಟಿ. ಮೆರಿಲ್ ಅವರು, ಮಕ್ಕಳ ಬದುಕುವ, ರಕ್ಷಣೆ, ಭಾಗವಹಿಸುವ ಹಾಗೂ ಬೆಳವಣಿಗೆ ಹಕ್ಕು ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವ ಛತ್ರಪತಿ ಸ್ಮಾರಕ ಸಮಿತಿಯ ಕಾರ್ಯದರ್ಶಿ ಸತೀಶ ಮುಳೆ ಅವರು, ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಆಗಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕರಾದ ಪರಮೇಶ್ವರ ಬಿರಾದಾರ, ಅರ್ಜುನ ಧುಳೆ, ಶಿವಕುಮಾರ ಸ್ವಾಮಿ, ಐಟಿಐ ಪ್ರಾಚಾರ್ಯ ವೀರಶೆಟ್ಟಿ ಹುಡಗೆ, ಆಡಳಿತಾಧಿಕಾರಿ ಅನಿಲಕುಮಾರ ಜಾಧವ್, ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಪಾಟೀಲ ಇದ್ದರು. ಅರಳು ಸಂಸ್ಥೆಯ ನಿರ್ದೇಶಕಿ ಸುನೀತಾ ನಿರೂಪಿಸಿದರು.
ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಅರಳು ಸಂಸ್ಥೆಯ ವತಿಯಿಂದ ಸಂಸತ್ ಹಮ್ಮಿಕೊಳ್ಳಲಾಗಿತ್ತು.

























