
ಜಮಖಂಡಿ :ಮಾ.5:ನಗರದ ದಾರೈನ್ ಮಹಿಳಾ ಶಿಕ್ಷಣ (ಬಿ.ಇಡ್) ಮಹಾವಿದ್ಯಾಲಯದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ರಂಜಾನ್ ಕರೀಮ್ ಗ್ರ್ಯಾಂಡ್ ಇಫ್ತಾರ್ ಕೂಟದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಗವಹಿಸಿ ಸಮಸ್ತ ಮುಸ್ಲಿಂ ಸಮುದಾಯಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪವಿತ್ರ ರಂಜಾನ್ ಮಾಸದ 13ನೇ ಉಪವಾಸವನ್ನು ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ರಂಜಾನ್ ಹಬ್ಬವು ಕೇವಲ ಭಾರತದಲ್ಲೇ ಅಲ್ಲದೆ ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಡುವ ಮಹತ್ವದ ಹಬ್ಬವಾಗಿದೆ” ಎಂದರು.
ಮುಸ್ಲಿಂ ಬಾಂಧವರು ಬೆಳಗ್ಗಿನಿಂದ ಸಾಯಂಕಾಲದವರೆಗೆ ಉಪವಾಸವಿದ್ದು, ಇಫ್ತಾರ್ ಮೂಲಕ ಉಪವಾಸ ಮುಗಿಸುವುದು ಶ್ರದ್ಧೆ ಮತ್ತು ನಿಯಮಾಚಾರದ ಸಂಕೇತವಾಗಿದೆ. ಒಂದು ತಿಂಗಳ ಕಾಲ ನಡೆಯುವ ಈ ಉಪವಾಸವು ಆತ್ಮಶುದ್ಧಿ, ಶಿಸ್ತು ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥನೆಯ ಸಮಯವಾಗಿದೆ ಎಂದು ಹೇಳಿದರು.
ಹಿಂದೂ ಸಮಾಜದಲ್ಲಿ ಶ್ರಾವಣ ಮಾಸದಲ್ಲಿ ಉಪವಾಸ ಆಚರಿಸುವಂತೆ, ಮುಸ್ಲಿಂ ಸಮಾಜದವರು ರಂಜಾನ್ ಮಾಸದಲ್ಲಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ-ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಸಯ್ಯದ ತೌಸಿಫ್ ಖಾದ್ರಿ ಅವರು ಉಪವಾಸ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದು ಶ್ಲಾಘನೀಯ. ಅವರು ಇದೇ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ಹಾಗೂ ಅಂಜುಮನ್-ಇ-ಇಸ್ಲಾಂ ಸಮಿತಿಯ ಕಾರ್ಯಾಧ್ಯಕ್ಷ ನಜೀರ್ ಕಂಗನೋಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾರೈನ್ ಗ್ರೂಪ್ ಅಧ್ಯಕ್ಷ ಡಾ. ತೌಸಿಫ್ ಖಾದ್ರಿ, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಅನ್ವರ್ ಮೋಮಿನ್, ನಗರಸಭೆ ಮಾಜಿ ಸದಸ್ಯ ಹಾಜಿ ಮುಬಾರಕ್ ಅಫ್ರಾದ್, ಅಲ್ಪಸಂಖ್ಯಾತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾದಿಕ್ ಬಂಟ್ನೂರು,ಹುಸೇನ್ ತಾಂಬೋಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.




















