
ಚಿಟಗುಪ್ಪ, ಮೇ ೧೪: ತಾಲೂಕಿನ ರಾಂಪೂರ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಭವ್ಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಹಲವು ದಶಕಗಳಿಂದ ಗ್ರಾಮಸ್ಥರ ಕನಸಾಗಿದ್ದ ಬಸವೇಶ್ವರ ಪ್ರತಿಮೆ ಸ್ಥಾಪನೆ ಕಾರ್ಯ ಮಠಾಧೀಶರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ನಾಡೋಜ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ತತ್ವಗಳಾದ ಸ್ವಾತಂತ್ರ‍್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ ಹಾಗೂ ಸಹಬಾಳ್ವೆಯ ಮೂಲಕ ಸುಂದರ ಸಮಾಜ ನಿರ್ಮಾಣ ಸಾಧ್ಯವೆಂದು ತಿಳಿಸಿದರು. ಬಸವಣ್ಣನವರು ಜ್ಞಾನದ ಬೆಳಕು ಚೆಲ್ಲಿದ ಕಾಯಕಯೋಗಿಯಾಗಿದ್ದು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಿತ್ತುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಯುವಪೀಳಿಗೆ ಬಸವೇಶ್ವರರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಸವೇಶ್ವರರ ಮೂರ್ತಿ ಅನಾವರಣಗೊಂಡ ತಕ್ಷಣ “ಬಸವೇಶ್ವರ ಮಹಾರಾಜ್ ಕಿ ಜೈ” ಘೋಷಣೆಗಳು ಮೊಳಗಿದವು. ಯುವಕರು ಕೇಸರಿ ಶಾಲು ಧರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮಸ್ಥರು ಸಿಹಿ ಹಂಚಿಕೊAಡು ಪರಸ್ಪರ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಖೇಳಗಿ ಶಿವಲಿಂಗೇಶ್ವರ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಜಾತಿ-ಮತ-ಧರ್ಮ ಬೇಧವಿಲ್ಲದೆ ಗ್ರಾಮಸ್ಥರು ಒಂದಾಗಿ ಮೂರ್ತಿ ಅನಾವರಣ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲೇ ಸಮಾನತೆಗಾಗಿ ಹೋರಾಡಿದ್ದು, ರಾಂಪೂರ ಗ್ರಾಮದಲ್ಲಿ ಇಂದು ಅದೇ ಭಾವೈಕ್ಯತೆ ಕಾಣುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಯುವಕರು ದುಶ್ಚಟಗಳಿಂದ ದೂರವಿದ್ದು ಆದರ್ಶ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಮುಖ್ಯಸ್ಥರು ಹಾಗೂ ಖ್ಯಾತ ಪ್ರವಚನಕಾರರಾದ ಪೂಜ್ಯ ಶರಣೆ ಗಂಗಾAಬಿಕೆ ಪಾಟೀಲ್ ತಾಯಿಯವರು ಮಾತನಾಡಿ, ಬಸವಾದಿ ಶರಣರು ಮೇಲು-ಕೀಳು ಭಾವನೆ ನಿವಾರಿಸಿ ಸಮಾನತೆಯ ಸಂದೇಶ ಸಾರಿದ್ದಾರೆ ಎಂದರು. ಬಸವ ತತ್ವಗಳನ್ನು ನಿಷ್ಠೆಯಿಂದ ಪಾಲಿಸಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಸವ ತತ್ವ ಪ್ರಚಾರಕರಾದ ಪೂಜ್ಯ ಶರಣೆ ಇಂದುಮತಿ ಗಾರಂಪಳ್ಳಿ ತಾಯಿಯವರು ಮಾತನಾಡಿ, ಹಿರಿಯರ ಮಾರ್ಗದರ್ಶನ, ಯುವಕರ ಶಕ್ತಿ ಹಾಗೂ ಮಾತೆಯರ ಸಹಕಾರದಿಂದ ಮೂರ್ತಿ ಅನಾವರಣ ಸಾಧ್ಯವಾಗಿದೆ ಎಂದರು. ಬಸವ ತತ್ವಗಳು ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಗುರುಕುಲ ಶಾಲೆ ಕಂದಗೋಳ ವಿದ್ಯಾರ್ಥಿಗಳಿಂದ ವಚನ ಗಾಯನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸುರೇಶ ಮಾಶೆಟ್ಟಿ, ರೇವಪ್ಪಾ ಪಾಟೀಲ, ಮನೋಜಕುಮಾರ ಕಾಂಬಳೆ, ರಾಮಶೆಟ್ಟಿ ಮೂಲಗೆ, ದಯಾನಂದ ಪಾಟೀಲ, ಜಗದೀಶ್ ಮೂಲಗೆ, ರಾಜಶೇಖರ ದೇವಣಿ, ರಮೇಶ ಮಾಶೆಟ್ಟಿ, ರಾಜಕುಮಾರ ನೆಲ್ವಾರೆ, ಕಾಶಿನಾಥ ಗಿರಿಗಿರಿ ಸೇರಿದಂತೆ ಬಸವೇಶ್ವರ ಮೂರ್ತಿ ಅನಾವರಣ ಸಮಿತಿಯ ಪದಾಧಿಕಾರಿಗಳು, ಮಾತೆಯರು, ಬಸವಾಭಿಮಾನಿಗಳು, ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜಗದೀಶ್ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.






















