Home ಜಿಲ್ಲೆ ತುಮಕೂರು ಗಂಗಾಕಲ್ಯಾಣ ಯೋಜನೆಯಲ್ಲಿ ಲಂಚಾವತಾರ: ಸಂಪೂರ್ಣ ತನಿಖೆಗೆ ಆಗ್ರಹ

ಗಂಗಾಕಲ್ಯಾಣ ಯೋಜನೆಯಲ್ಲಿ ಲಂಚಾವತಾರ: ಸಂಪೂರ್ಣ ತನಿಖೆಗೆ ಆಗ್ರಹ

ಪಾವಗಡ, ಜು.೧೦- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಅರ್ಹ ಬಡ ರೈತರಿಗೆ ಉಚಿತವಾಗಿ ಸಿಗಬೇಕಾದ ‘ಗಂಗಾ ಕಲ್ಯಾಣ’ ಯೋಜನೆಯಡಿ, ಶಾಸಕರ ಗಮನಕ್ಕೆ ಬಾರದೇ ಮಧ್ಯವರ್ತಿಗಳು ನಿಯಮ ಬಾಹಿರವಾಗಿ ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿರುವ ಆಘಾತಕಾರಿ ಹಗರಣ ಬಯಲಿಗೆ ಬಂದಿದೆ.


ಇತ್ತೀಚಿಗೆ ಪಾವಗಡದ ಶಾಸಕರ ಭವನದಲ್ಲಿ ೨ನೇ ಜನ ಸಂಪರ್ಕ ಸಭೆಯಲ್ಲಿ ಖುದ್ದು ಕ್ಷೇತ್ರದ ಶಾಸಕರಾದ ಹೆಚ್ ವಿ ವೆಂಕಟೇಶ್ ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇಡೀ ಭ್ರಷ್ಟಾಚಾರದ ಕುರಿತು ಉನ್ನತ ಮಟ್ಟದ ಸಂಪೂರ್ಣ ತನಿಖೆಯಾಗಬೇಕು ಎಂದು ಸಾರ್ವಜನಿಕರು ಹಾಗೂ ರೈತ ಸಂಘಟಗಳು ಒತ್ತಾಯಿಸುತ್ತಿವೆ.


ತಾಲ್ಲೂಕಿನಲ್ಲಿ ಕಳೆದ ೨೦೧೮ ರಿಂದ ಇಂದಿನವರೆಗೂ ಕೆಲವು ಪ್ರಭಾವಿ ದಲ್ಲಾಳಿಗಳು ಸಕ್ರಿಯರಾಗಿದ್ದು, ಗಂಗಾ ಕಲ್ಯಾಣ ಯೋಜನೆಯಡಿ ಉಚಿತವಾಗಿ ಸಿಗಬೇಕಾದ ಸೌಲಭ್ಯವನ್ನು ಕೊಡಿಸುವುದಾಗಿ ನಂಬಿಸಿ ಅರ್ಜಿದಾರರಿಂದ ಲಕ್ಷಾಂತರ ರೂಪಾಯಿ ಲಂಚದ ಹಣ ವಸೂಲಿ ಮಾಡಿದ್ದಾರೆ. ಶಾಸಕರ ನೇತೃತ್ವದ ಆಯ್ಕೆ ಸಮಿತಿಯ ಗಮನಕ್ಕೆ ತರದೆ, ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮಗೆ ಬೇಕಾದ ಕಡೆ ಕೊಳವೆ ಬಾವಿಗಳನ್ನು ಕೊರೆಸಿರುವುದು ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಬೆಳಕಿಗೆ ಬಂದಿದೆ.


ಅರ್ಹ ಬಡ ರೈತರಿಗೆ ತಲುಪಬೇಕಾದ ಸರ್ಕಾರಿ ಯೋಜನೆಯು ಇಲ್ಲಿ ಸಂಪೂರ್ಣ ದುರುಪಯೋಗವಾಗಿದೆ. ಒಂದೇ ಗ್ರಾಮದ, ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿಯಮಗಳನ್ನು ಗಾಳಿಗೆ ತೂರಿ ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ. ಇದರ ಜತೆಗೆ, ಇದೇ ದಂಧೆಯಲ್ಲಿ ತೊಡಗಿರುವ ಒಬ್ಬನೇ ಮಧ್ಯವರ್ತಿಯೊಬ್ಬರು ಸುಮಾರು ೧೦ ಕೊಳವೆ ಬಾವಿಗಳನ್ನು ಕಾನೂನು ಬಾಹಿರವಾಗಿ ಕೊರೆಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.


ಜನಸಂಪರ್ಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಸ್ಥಳದಲ್ಲಿದ್ದ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಿಮ್ಮ ಕಣ್ಣೆದುರೇ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದ್ದರೂ ನೀವೇನು ಮಾಡುತ್ತಿದ್ದೀರಿ, ಶಾಸಕರ ಅಧ್ಯಕ್ಷತೆಯ ಸಮಿತಿಯ ಅನುಮೋದನೆ ಇಲ್ಲದೆ ಇಷ್ಟೊಂದು ಬಾವಿಗಳನ್ನು ಕೊರೆಯಲು ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡು, ತಕ್ಷಣವೇ ವರದಿ ನೀಡುವಂತೆ ಆದೇಶಿಸಿದ್ದಾರೆ.


ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೇ ನೇರ ಆರೋಪ ಮಾಡಿರುವುದರಿಂದ, ಈ ಪ್ರಕರಣವನ್ನು ಕೇವಲ ಇಲಾಖಾ ಮಟ್ಟದ ತನಿಖೆಗೆ ಸೀಮಿತಗೊಳಿಸದೆ ಸ್ವತಂತ್ರ ತನಿಖಾ ಸಂಸ್ಥೆಗೆ ಅಥವಾ ಜಿಲ್ಲಾಧಿಕಾರಿಗಳ ನೇತೃತ್ವದ ವಿಶೇಷ ತಂಡಕ್ಕೆ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಬರಗಾಲದ ಈ ಪರಿಸ್ಥಿತಿಯಲ್ಲಿ ನೀರಿಲ್ಲದೆ ಬಡ ರೈತರು ಒದ್ದಾಡುತ್ತಿದ್ದಾರೆ. ಆದರೆ ಮಧ್ಯವರ್ತಿಗಳು ಕಮಿಷನ್ ಪಡೆದು ಶ್ರೀಮಂತರಿಗೆ, ಒಂದೇ ಕುಟುಂಬದವರಿಗೆ ಬಾವಿ ತೋಡಿಸಿಕೊಡುತ್ತಿದ್ದಾರೆ. ಶಾಸಕರ ಆರೋಪದ ಬೆನ್ನಲ್ಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ದಲ್ಲಾಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಸ್ಥಳೀಯ ರೈತ ಮುಖಂಡರು ಎಚ್ಚರಿಸಿದ್ದಾರೆ.


ಒಂದು ವೇಳೆ ತನಿಖೆ ವಿಳಂಬವಾದರೆ ತಾಲ್ಲೂಕು ಕಚೇರಿ ಹಾಗೂ ನಿಗಮದ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನಾನು ಬೆಂಗಳೂರು ತುಮಕೂರು, ಪಾವಗಡ, ಹನುಮಂತನಹಳ್ಳಿ ತೋಟದ ಮನೆಯಲ್ಲಿದ್ದಾಗ ನನ್ನ ಲೆಟರ್ ಹೆಡ್ ಪಡೆದುಕೊಂಡು ತಮ್ಮ ಕೆಲಸ ಕಾರ್ಯಗಳು ಮಾಡಿಸಿಕೊಡುತ್ತಾರೆ, ಆದರೆ ಬಿಸಿಎಂ ಇಲಾಖೆಯಲ್ಲಿ ಕೊಳವೆ ಬಾವಿಗಳಲ್ಲಿ ನನ್ನ ಲೆಟರ್ ಹೆಡ್ ಉಪಯೋಗಿಸಿಕೊಂಡು ಫಲಾನುಭವಿಗಳಿಂದ ೧ ಲಕ್ಷದವರೆಗೂ ಲಂಚ ಪಡೆದುಕೊಂಡಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ಸಂಪೂರ್ಣ ತನಿಖೆಗೆ ನಾನು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ವೆಂಕಟೇಶ್ ತಿಳಿಸಿದರು.