
ಕಲಬುರಗಿ: ಫೆ.18:ಎಲ್ಲಾ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ ಏಕತೆ, ಎಲ್ಲ ಧರ್ಮಗಳ ಸಾಮರಸ್ಯ ಸೇರಿದಂತೆ ಇನ್ನಿತರ ತತ್ವ, ನುಡಿಗಳನ್ನು ರಾಮಕೃಷ್ಣ ಪರಮಹಂಸರು ನೀಡಿದ್ದಾರೆ. ಭಕ್ತಿ ಮತ್ತು ಕರ್ಮಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ಮುತ್ತಾ ಟ್ಯುಟೋರಿಯಲ್ಸ್‍ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ರಾಮಕೃಷ್ಣ ಪರಮಹಂಸರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶ ಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು. ರಾಮಕೃಷ್ಣ ಪರಮಹಂಸರ ಮುಂದೆ ಐಹಿಕ ಸುಖ, ಸಂಪತ್ತು, ಸಮೃದ್ಧಿ, ಬೆಲೆಬಾಳುವ ವಸ್ತುಗಳಿಗೂ ಬೆಲೆಯೇ ಇರಲಿಲ್ಲ. ಅವರ ವಚನಾಮೃತದ ಶೈಲಿಯು ಭಾರತದ ಪ್ರಾಚೀನ ಋಷಿಗಳು, ಮಹಾನ್ ಸಂತರ ಉಪದೇಶದ ವಿಧಾನವನ್ನು ಹೋಲುತ್ತದೆ. ಅವರು ತಮ್ಮ ಬೋಧನೆಗಳಲ್ಲಿ ತಾರ್ಕಿಕತೆಗೆ ಕಡಿಮೆ ಅವಲಂಬನೆಯನ್ನು ಬಳಸಿದರು, ಅವರು ವಿವರಿಸಬೇಕಾದದ್ದನ್ನು ಸಾಮ್ಯತೆಗಳೊಂದಿಗೆ ಮತ್ತು ವಿವರಣೆಗಳೊಂದಿಗೆ ವಿವರಿಸುತ್ತಿದ್ದರು ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ ಮಾತನಾಡಿ, ಯಾವುದೇ ಸ್ವಾರ್ಥ ಉದ್ದೇಶವಿಲ್ಲದೆ ಇತರರಿಗಾಗಿ ಕೆಲಸ ಮಾಡುವ ವ್ಯಕ್ತಿ ನಿಜವಾಗಿಯೂ ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ. ಸತ್ಯವನ್ನು ಹೇಳುವುದರಲ್ಲಿ ಒಬ್ಬರು ಬಹಳ ನಿರ್ದಿಷ್ಟವಾಗಿರಬೇಕು. ಸತ್ಯದ ಮೂಲಕ ದೇವರನ್ನು ಅರಿತುಕೊಳ್ಳಬಹುದು. ಮಾನವ ಜೀವನದ ಸರ್ವೋಚ್ಚ ಉದ್ದೇಶ ಮತ್ತು ಗುರಿ ಮತ್ತು ಪ್ರೀತಿಯನ್ನು ಬೆಳೆಸುವುದಾಗಿದೆ ಎಂಬ ಪರಮಹಂಸರ ತತ್ವ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಆದರ್ಶ ವಡ್ಡನಕೇರಿ,ವಿರಾಜ, ಆದಿತ್ಯ, ಅರುಣ, ಪರವೀಣ ಸೇರಿದಂತೆ ಇನ್ನಿತರರಿದ್ದರು.



























