
ಬೆಂಗಳೂರು,ಜ.೨೦-ರಾಸಲೀಲೆ ವಿಡಿಯೋ ವೈರಲ್ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಲಾಗಿದ್ದು,ರಾಜ್ಯದ ಯಾವುದೇ ಇಲಾಖೆಯಲ್ಲಿಯೂ ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಇಂತಹ ಪ್ರಕರಣಗಳು ಯಾರಿಗೂ ಗೌರವ ಗಣತೆ ತರಲ್ಲ ಇಂತಹಹುದುಗಳನ್ನ ಸಹಿಸುವ ಪ್ರಶ್ನೆಯೇ ಇಲ್ಲ ಎಂದರು ಅವರು ಈ ರೀತಿ ವಿಡಿಯೋ ವೈರಲ್ ಆಗುತ್ತಿರುವುದರ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಇಂಥದ್ದೆಲ್ಲ ಯಾವುದೇ ಇಲಾಖೆಯಲ್ಲಿಯೂ ಆಗಬಾರದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಹೇಳಿದರು.
ಇದು ಸುಳ್ಳು ವಿಡಿಯೋ ಎಂದು ರಾಮಚಂದ್ರರಾವ್ ಹೇಳಿದ್ದನ್ನು ಗಮನಿಸಿದ್ದೇನೆ. ಅಂಥದ್ದೇನಾದಾರೂ ಇದ್ದರೆ ತನಿಖೆಯಲ್ಲಿ ತಿಳಿಯಲಿದೆ. ಆದರೆ ಮೇಲ್ನೋಟಕ್ಕೆ ಇಂಥ ವಿಚಾರಗಳು ಯಾರಿಗೂ ಶೋಭೆಯಲ್ಲ ಎಂದರು.
ವಿಡಿಯೋ ವೈರಲ್ ಆದ ನಂತರ ನಿನ್ನೆ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರಂತೆ, ಆ ಸಂದರ್ಭದಲ್ಲಿ ನಾನು ಮಲಗಿದ್ದರಿಂದ ಭೇಟಿಯಾಗಲಿಲ್ಲ, ಭೇಟಿಯಾಗುವುದೂ ಇಲ್ಲ. ಇಂಥ ಸನ್ನಿವೇಶದಲ್ಲಿ ನಾವು ಕಠಿಣವಾಗಿ ಇರಬೇಕಾಗುತ್ತದೆ ಎಂದು ಹೇಳಿದರು.
’ವಜಾಮಾಡಬಹುದು’:
ರಾಮಚಂದ್ರ ರಾವ್ ಅವರನ್ನು ಬಂಧಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮ ತೆಗೆದುಕೊಂಡಿದ್ದೇವೆ. ತನಿಖೆ ನಡೆಸಿದ ಬಳಿಕ ಏನು ಬೇಕಾದರೂ ಆಗಬಹುದು. ಅವರನ್ನು ವಜಾ ಸಹ ಮಾಡಬಹುದು. ಅಂಥ ಸಂದರ್ಭ ಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಮಾತ್ರವಲ್ಲ, ಯಾವುದೇ ಇಲಾಖೆಯಲ್ಲಿಯೂ ಇವುಗಳನ್ನೆಲ್ಲ ಘಟನೆಗಳನ್ನು ಸಹಿಸಲಾಗದು ಎಂದರು.



























