
ಬೀದರ್: ಮಾ.೨೮: ಲೋಕ ಧರ್ಮದಲ್ಲಿ ಉನ್ನತವಾದ ಆದರ್ಶ ಮೇಲ್ಪಂಕ್ತಿ ರೂಪಿಸುವುದರೊಂದಿಗೆ ಒಟ್ಟು ಮೌಲ್ಯಗಳ ಘನೀಕೃತ ರೂಪವೇ ರಾಮ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ರಾಮಾಲಿಂಗೇಶ್ವರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯ ಪಾವನ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು ಕಾಲಾತೀತ, ಸೀಮಾತೀತನಾದ ಶ್ರೀರಾಮಚಂದ್ರನ ಆದರ್ಶ ಎಂದಿಗೂ ಪ್ರಸ್ತುತವಾಗಿದ್ದು ಲೋಕಕಲ್ಯಾಣದ ಪರಮ ಶ್ರೇಯಸ್ಸಿಗೆ ಬೆಳಕು ನೀಡುತ್ತಿರುವ ದಿವ್ಯಾನುಭವದ ನಿಧಿಯಾಗಿದೆ.
ರಾಮನ ತತ್ವಾದರ್ಶ ಪಾಲಿಸುವುದರಿಂದ ವಿಶ್ವ ಬಂದುತ್ವ ಸಾಧಿಸಿ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳುವದಕ್ಕೆ ಸಾಧ್ಯವಾಗುತ್ತದೆ.
ನಡೆ-ನುಡಿ ಒಂದಾಗಿಸಿಕೊAಡು ಬದುಕಿದ ರಾಮನ ಇಡೀ ಜೀವನವೇ ಒಂದು ದಿವ್ಯ ಸಂದೇಶವಾಗಿದ್ದು, ಎಲ್ಲಾ ಕ್ಷೇತ್ರಗಳ ಸಾತ್ವಿಕ ವ್ಯವಹಾರಗಳಿಗೆ ರಾಮದೇವರು ಸಕಾರಾತ್ಮಕ ಪ್ರೇರಣೆ ನೀಡುವಂತವರಾಗಿದ್ದಾರೆ ಎಂದು ನುಡಿದರು.
ಹಾರಕೂಡ ಚನ್ನಬಸವ ಶಿವಯೋಗಿಗಳ ಪಾವನ ಭೂಮಿಯಲ್ಲಿ ಪ್ರತಿವರ್ಷ ಶ್ರೀರಾಮ ನವಮಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು ಸರ್ವರಿಗೂ ರಾಮ ಶುಭವನ್ನು ಅನುಗ್ರಹಿಸಲಿ ಹಾಗೂ ವಿಶ್ವದಲ್ಲಿ ಶಾಂತಿ ಸಹಬಾಳ್ವೆ ನೆಲೆಗೊಳ್ಳಲಿ ಎಂದು ಶುಭ ಹಾರೈಸಿದರು.
ಸೂರ್ಯಕಾಂತ ಬೆಳಮಗೆ ಸ್ವಾಗತಿಸಿದರು.
ಪಂಡಿತರಾವ ಡಾವರೆ, ಅರುಣ ಗುದಗೆ, ಸುಭಾಷ ದೇಗಾಂವ, ಅಪ್ಪಾರಾವ ಬಿರಾದಾರ, ಕಾಶಪ್ಪ ಚೌದರಿ, ಮೇಗಣ್ಣ ಪೀರಜೆ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ : ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರಾಮನವಮಿ ನಿಮಿತ್ಯ ಆಯೋಜಿಸಿದ ಧರ್ಮಸಭೆಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ಸೂರ್ಯಕಾಂತ ಬೆಳಮಗೆ, ಪಂಡಿತರಾವ ಡಾವರೆ, ಮಂಜುನಾಥ ಪೀರಜೆ, ಅಪ್ಪಾರಾವ ಬಿರಾದಾರ, ಸುನೀಲ ನಾಗರಾಳೆ, ಶುಭಾಷ ದೇಗಾಂವ ಉಪಸ್ಥಿತರಿದ್ದರು.




















