
ಅಯೋಧ್ಯೆ, ನ. ೨೫- ಅಯೋಧ್ಯೆಯ ರಾಮಮಂದಿರದ ಶಿಖರದಲ್ಲಿಂದು ಭಗವಾ ಧ್ವಜಾರೋಹಣ ನೆರವೇರಿಸಲಲಾಗಿದ್ದು, ಅಯೋಧ್ಯೆಯ ಶ್ರೀ ರಾಮಮಂದಿರದ ನಿರ್ಮಾಣ ಸಂಪನ್ನಗೊಂಡಿದೆ.
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಮಂದಿರದ ಶಿಖರದಲ್ಲಿ ಭಗವಾ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ದೇಗುಲದ ಶಿಖರದ ಮೇಲೆ ಹತ್ತು ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಿ ಶ್ರೀ ರಾಮಮಂದಿರದ ನಿರ್ಮಾಣ ಸಂಪನ್ನವಾಗಿರುವುದನ್ನು ಘೋಷಿಸಿದರು.
ರಾಮಮಂದಿರ ನಿರ್ಮಾಣದ ಇತಿಹಾಸವು ಶತಮಾನಗಳಷ್ಟು ಹಿಂದಿನದು. ಮೊಘಲ್ ಚಕ್ರವರ್ತಿ ಬಾಬರ್‌ನ ಸೇನಾಧಿಪತಿಯಾಗಿದ್ದ ಮೀರ್ ಬಾಕಿ ಹಳೆಯ ದೇವಾಲಯವನ್ನು ಕೆಡವಿ ಬಾಬರಿ ಮಸೀದಿ ನಿರ್ಮಿಸಿದ್ದ ಎಂದು ಹೇಳಲಾಗುತ್ತಿದೆ.
ಅಂದಿನಿಂದ ಈ ಸ್ಥಳವು ವಿವಾದದಲ್ಲೇ ಇತ್ತು. ಬರೋಬ್ಬರಿ ೫೦೦ ವರ್ಷಗಳ ಹೋರಾಟ, ಬಲಿದಾನಗಳ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣಗೊಂಡು ೨೦೨೪ ರಲ್ಲಿ ಉದ್ಘಾಟನೆಗೊಂಡಿತ್ತು.
ರಾಮಂದಿರದ ಉದ್ಘಾಟನಾ ಸಮಾರಂಭದ ವೇಳೆ ರಾಮಮಂದಿರದ ಕಾಮಗಾರಿಗಳು ಸಂಪೂರ್ಣಗೊಂಡಿರಲಿಲ್ಲ. ಈಗ ಒಂದು ವರ್ಷದ ಬಳಿಕ ರಾಮಮಂದಿರದ ಕಾಮಗಾರಿ ಸಂಪೂರ್ಣಗೊಂಡಿದ್ದು, ದೇಗುಲದ ಶಿಖರದ ಮೇಲೆ ೧೦ ಅಡಿ ಎತ್ತರದ ಭಗವಾ ಧ್ವಜಾರೋಹಣವನ್ನು ಪ್ರಧಾನಿ ಮೋದಿ ನೆರವೇರಿಸಿದರು.
ರಾಮಮಂದಿರದ ಶಿಖರದ ಮೇಲೆ ಸ್ಥಾಪಿಸಲಾದ ೪೨ ಅಡಿ ಎತ್ತರದ ಧ್ವಜ ಸ್ತಂಭವನ್ನು ೩೬೦ ಅಡಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. ಹತ್ತು ಅಡಿ ಎತ್ತರ ಮತ್ತು ೨೦ ಅಡಿ ಉದ್ದವಿದೆ. ಧ್ವಜದ ಮೇಲೆ ಸೂರ್ಯ, ಓಂ ಹಾಗೂ ಕೋವಿದಾರ ಮರದ ಚಿತ್ರವನ್ನು ಚಿತ್ರಿಸಲಾಗಿದೆ.
ಸೂರ್ಯನ ಚಿತ್ರ, ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ಓಂ ಶುಭ ಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.
ರಾಮಮಂದಿರದ ಶಿಖರದ ಮೇಲೆ ಭಗವಾ ಧ್ವಜಾರೋಹಣ ಅಂಗವಾಗಿ ಅಯೋಧ್ಯೆಯಲ್ಲಿ ನಿನ್ನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು, ಇಂದು ಬೆಳಗ್ಗೆ ೧೧.೫೮ ರಿಂದ ಮಧ್ಯಾಹ್ನ ೧ ಗಂಟೆಗೆ ನಡುವಿನ ಶುಭ ಅಭಿಜಿನ್ ಮಹೋರ್ತದಲ್ಲಿ ಮೋದಿ ಅವರು ಭಗವಾ ಧ್ವಜಾರೋಹಣ ನೆರವೇರಿಸಿದರು.
ಈ ದಿನ ಮಾರ್ಗಶಿರ ಶುಕ್ಲ ಪಂಚಮಿ ತಿಥಿಯಾಗಿದ್ದು, ಇದೇ ದಿನ ಶ್ರೀರಾಮ ಮತ್ತು ಸೀತೆಯರ ವಿವಾಹವಾಗಿತ್ತು ಎಂದು ಪುರಾಣಗಳು ಹೇಳುತ್ತವೆ.
ಅಯೋಧ್ಯೆಯಲ್ಲಿ ೪೮ ಗಂಟೆಗಳ ಕಾಲ ಅಖಂಡ ತಪಸ್ಸು ಕೈಗೊಂಡು ಸಿಖ್ ಗುರು ತೇಜ್‌ಬಹದ್ದೂರ್ ರವರ ಬಲಿದಿನವೂ ಇವತ್ತೆ ಬಂದಿದೆ. ಹಾಗಾಗಿ ಈ ದಿನ ಭಗವಾ ಧ್ವಜಾರೋಹಣ ಮಂಗಳ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಶ್ರೀರಾಮಮಂದಿರದ ಮೇಲೆ ೧೬೧ ಅಡಿ ಎತ್ತರದ ಶಿಖರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ ಮಂತ್ರ ಘೋಷ ಮೊಳಗಿದವು, ಜೊತೆಗೆ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿದ್ದು ರಾಮಭಕ್ತರ ಹರ್ಷೋದ್ಘಾರ , ಸಂತಸ ಹಿಮ್ಮಡಿಗೊಂಡಿತ್ತು. ಇಡೀ ಅಯೋಧ್ಯೆ ಕೇಸರಿಮಯವಾಗಿತ್ತು.
೨೨ ಅಡಿ ಉದ್ದ ಮತ್ತು ೧೧ ಅಡಿ ಅಗಲವಿರುವ ಧ್ವಜವನ್ನು ರಾಮ ದೇವಾಲಯದ ಶಿಖರದ ಮೇಲೆ ೪೨ ಅಡಿ ಎತ್ತರದ ಕಂಬದ ಮೇಲೆ ಹಾರಿಸಿ ಶ್ರೀರಾಮನ ಬಾಲ ಪ್ರತಿಮೆ ರಾಮ ಲಲ್ಲಾನ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ಮಾಡಿಕೊಟ್ಟರು. ಈ ಈ ವೇಳೆ ಆರ್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ರಾಮ ಲಲ್ಲಾನಿಗೆ ಪೂಜೆ ಸಲ್ಲಿಸಿದರು.
ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಲ್ಲಿ ಭಾಗಿಯಾಗಿ ಸಪ್ತಮಂದಿರದಲ್ಲಿ ಪೂಜೆ ಸಲ್ಲಿಸಿದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಕರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಕೇಂದ್ರ ಸಚಿವರು, ಧಾರ್ಮಿಕ ಮುಖಂಡರು ಸಾಕ್ಷಿಯಾದರು.
ಈ ಬೃಹತ್ ಪವಿತ್ರ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯನ್ನು ಅಲಂಕರಿಸಲು ಸುಮಾರು ೧೦೦ ಟನ್ ಹೂವುಗಳನ್ನು ಬಳಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ ಕೂಡಲೇ ರಾಮಲಲ್ಲಾನಿಗೆ ಆರತಿ ಮಾಡಲಾಯಿತು, ಈ ವೇಳೆ ಜೈ ಶ್ರೀರಾಮ ಘೋಷಣೆ , ಘಂಟನಾದ ಮುಗಿಲು ಮುಟ್ಟುವಂತೆ ಇತ್ತು.
ಧ್ವಜಾರೋಹಣದ ಭವ್ಯ ಕಾರ್ಯಕ್ರಮದಲ್ಲಿ ಸುಮಾರು ೬,೦೦೦ ರಿಂದ ೮,೦೦೦ ಆಹ್ವಾನಿತರು ಭಾಗವಹಿಸಿದ್ದರು.
ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ ಶ್ರೀ ರಾಮನು ಊಟ ಮಾಡಿದ ಮತ್ತು ಸೌಲಭ್ಯಗಳನ್ನು ಬಳಸಿದ ವಿಭಾಗ. ಬಾಲ್ಯದಿಂದಲೂ ನಿಷಾದ್ ಜಿ ಮತ್ತು ಶಬರಿ ಮಾತೆಯ ಕಥೆ ಸೇರಿದಂತೆ ಇನ್ನಿತರೆ ರಾಮನಿಗೆ ಸಂಬಂಧಿಸಿದ ಕಥೆಗಳನ್ನು ಚಿತ್ರರೂಪದಲ್ಲಿ ಬಿಡಿಸಿದ್ದು ರಾಮಭಕ್ತರಿಗೆ ಮತ್ತಷ್ಟು ಸಂತಸ ತರಲಿದೆ ಎಂದಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಸಮಾರಂಭ ದೇವಾಲಯದ ನಿರ್ಮಾಣದ ಔಪಚಾರಿಕ ಪೂರ್ಣ ಗೊಳಿಸುವಿಕೆ ಸಂಕೇತವಾಗಿದೆ. ಭಗವಾನ್ ರಾಮನ ಸಂಪೂರ್ಣ ಸಾರ್ವಭೌಮ ದೈವಿಕ ವಾಸಸ್ಥಾನಕ್ಕೆ ದೇವಾಲಯದ ಪರಿವರ್ತನೆಯಾಗಿದೆ. ದೇವಾಲಯದ ಟ್ರಸ್ಟ್ ಅಧಿಕಾರಿಗಳು ಮತ್ತು ಪುರೋಹಿತರ ಪ್ರಕಾರ, ಈ ಆಚರಣೆಯು ಸ್ಥಳದ ಆಧ್ಯಾತ್ಮಿಕ ಸಕ್ರಿಯಗೊಳಿಸುವಿಕೆಯನ್ನು ಘೋಷಿಸುತ್ತದೆ.
ಅಯೋಧ್ಯೆಯ ರಾಮಮಂದಿರದ ಭಗವಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರ ಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ನೇರವಾಗಿ ಅಯೋಧ್ಯೆಗೆ ಆಗಮಿಸಿ ರಾಮಮಂದಿರದ ಭಗವಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು.
ಅಯೋಧ್ಯೆಯ ರಾಮಮಂದಿರದ ಸಂಪನ್ನ ಧ್ವಜಾರೋಹಣ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಇಂದು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಗಣ್ಯರು ಮತ್ತು ಆಹ್ವಾನಿತರಿಗೆ ಮಾತ್ರ ದೇವಾಲಯ ಪ್ರವೇಶ ಇತ್ತು.
ಕಾಶಿಯ ಪ್ರಸಿದ್ಧ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ೧೦೮ ಆಚಾರ್ಯರು ಧ್ವಜಾರೋಹಣದ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶ್ರೀರಾಮಮಂದಿರದ ಸಂಪನ್ನದ ಕಾರ್ಯಕ್ರಮದ ಭಗವಾ ಧ್ವಜಾರೋಹಣ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆ ನಗರ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಸುಪ್ರೀಂಕೋರ್ಟ್‌ನಲ್ಲಿ ರಾಮಮಂದಿರ ನಿರ್ಮಾಣದ ವಾದ ಬಗೆಹರಿದ ನಂತರ ೨೦೨೦ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
೨೦೨೪ರ ಜನವರಿ ೨೨ ರಂದು ಪ್ರಧಾನಿ ಮೋದಿ ಅವರು ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಿದ್ದರು. ಇದಾದ ಬಳಿಕ ಈಗ ರಾಮಮಂದಿರ ಸಂಪನ್ನಗೊಂಡಿದೆ.
ಧ್ವಜದ ವಿಶೇಷತೆಗಳು
ಪ್ರಧಾನಿ ನರೇಂದ್ರ ಮೋದಿ ಅವರು ಆಯೋದ್ಯೆಯಲ್ಲಿ ಹಾರಿಸುದ ಧ್ವಜ ಹಲವು ವಿಶೇಷತೆಗಳಿಂದ ಕೂಡಿದೆ. ಕೇಸರಿ ಧ್ವಜ ಚಿನ್ನದ ದಾರದಲ್ಲಿ ಕೈಯಿಂದ ಕಸೂತಿ ಮಾಡಲಾದ ಮೂರು ಪವಿತ್ರ ಚಿಹ್ನೆಗಳನ್ನು ಒಳಗೊಂಡಿದೆ.
ಭಗವಾ ರಾಮನ ಸೂರ್ಯವಂಶ ಮತ್ತು ಶಾಶ್ವತ ಶಕ್ತಿಯನ್ನು ಪ್ರತಿನಿಧಿಸುವ ಸೂರ್ಯ. ಆಧ್ಯಾತ್ಮಿಕ ಕಂಪನವನ್ನು ಸಂಕೇತಿಸುವ ಪವಿತ್ರ ಓಂ; ಮತ್ತು ಶುದ್ಧತೆ, ಸಮೃದ್ಧಿ ಮತ್ತು “ರಾಮ ರಾಜ್ಯ”ವನ್ನು ಸೂಚಿಸುವ ಕೋವಿದರ್ ಮರದ ಲಕ್ಷಣಗಳನ್ನು ಒಳಗೊಂಡಿದೆ
ಕೋವಿದಾರ್ ಮರ ವಾಲ್ಮೀಕಿ ರಾಮಾಯಣದ ಪ್ರಕಾರ ಋಷಿ ಕಶ್ಯಪ್ ರಚಿಸಿದ ಮಂದಾರ ಮತ್ತು ಪಾರಿಜಾತ ಮರಗಳ ಮಿಶ್ರತಳಿಯಾಗಿದೆ. ಇದು ಪ್ರಾಚೀನ ಕಾಲದಲ್ಲಿ ಸಸ್ಯ ಮಿಶ್ರತಳಿ ಪ್ರದರ್ಶಿಸುತ್ತದೆ.
೨೦೨೪ರ ಜನವರಿ ೨೨ ರಂದು ನಡೆಸಲಾದ ಪ್ರಾಣ ಪ್ರತಿಷ್ಠೆಯು “ಗರ್ಭಗೃಹ”ದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯಾಗಿತ್ತು, ಅಂದರೆ ದೇವತೆಗೆ ಜೀವ ಶಕ್ತಿ ತುಂಬುವುದು ಮತ್ತು ಪೂಜೆ ಪ್ರಾರಂಭವಾಗಲಿದೆ. ಮತ್ತೊಂದೆಡೆ, ಧ್ವಜಾರೋಹಣ ವಾಸ್ತುಶಿಲ್ಪದ ಪೂರ್ಣಗೊಳಿಸುವಿಕೆ ಮತ್ತು ದೇವಾಲಯದ ಸಾರ್ವಭೌಮತ್ವದ ಸಾರ್ವಜನಿಕ ಘೋಷಣೆಯನ್ನು ಸೂಚಿಸುತ್ತದೆ. ಕೆಲವು ಪುರೋಹಿತರು ಇದನ್ನು “ಎರಡನೇ ಪ್ರಾಣ ಪ್ರತಿಷ್ಠೆ” ಎಂದು ಕರೆದಿದ್ದಾರೆ.
ಧ್ವಜ ತಯಾರಿಸಿದವರು ಯಾರು
ದೀರ್ಘಾಯುಷ್ಯಕ್ಕಾಗಿ ಬಾಳಿಕೆ ಬರುವ ಪ್ಯಾರಾಚೂಟ್-ದರ್ಜೆಯ ಬಟ್ಟೆ ಬಳಸಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶೇಷ ಪ್ಯಾರಾಚೂಟ್ ಉತ್ಪಾದನಾ ಕಂಪನಿಯು ೨೫ ದಿನಗಳಲ್ಲಿ ಧ್ವಜಗಳನ್ನು ತಯಾರು ಮಾಡಿದೆ.
ಸೂರ್ಯ, ಮಳೆ ಮತ್ತು ಬಲವಾದ ಗಾಳಿಯ ವಿರುದ್ಧ ಬಾಳಿಕೆ ಖಚಿತಪಡಿಸಿಕೊಳ್ಳಲು ಪ್ರೀಮಿಯಂ ರೇಷ್ಮೆ ದಾರಗಳು ಮತ್ತು ಪ್ಯಾರಾಚೂಟ್-ದರ್ಜೆಯ ಬಟ್ಟೆಯನ್ನು ಬಳಸಿ ಧ್ವಜವನ್ನು ವಿನ್ಯಾಸಗೊಳಿಸಲಾಗಿದೆ. ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಸಮಾಲೋಚನೆಯ ನಂತರ ಅದರ ವಿಶೇಷಗಳನ್ನು ಅಂತಿಮಗೊಳಿಸಲಾಯಿತು.


























