ಕೇಂದ್ರ ಕಾರಾಗೃಹದಲ್ಲಿ ರಕ್ಷಾಬಂಧನ

ಕಲಬುರಗಿ,ಆ.10: ಕಲಬುರಗಿ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ಶಾಖೆಯವರು ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಂದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಾಖಿ ಕಟ್ಟುವುದರ ಜೊತೆಗೆ ಸಿಹಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ ಬ್ರಹ್ಮಕುಮಾರಿ ದಾನೇಶ್ವರಿ ಅಕ್ಕನವರು ರಕ್ಷಾ ಬಂಧನ ರಹಸ್ಯದ ಬಗ್ಗೆ ವಿವರವಾಗಿ ತಿಳಿಸಿದರು. ಇನ್ನೋರ್ವ ಅಥಿತಿಗಳಾಗಿ ಆಗಮಿಸಿದ ಸವಿತಾ ಅಕ್ಕನವರು ಈಶ್ವರಿಯ ಸಂದೇಶವನ್ನು ಕುರಿತು ಬಂದಿಗಳಿಗೆ ತಿಳಿ ಹೇಳಿದರು ಹಾಗೂ ಅದರಂತೆ ತಾವುಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ಇನ್ನೋರ್ವ ಅಥಿತಿಗಳಾದ ಬ್ರಹ್ಮಕುಮಾರಿ ರಾಗಿಣಿ ಅಕ್ಕನವರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿಧ್ಯಾಲಯದ ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯ ಅಧೀಕ್ಷಕರಾದ ಡಾ.ಅನಿತಾ ಆರ್. ರವರು ಮಾತನಾಡುತ್ತಾ, ಪ್ರತಿಯೊಬ್ಬರು ಭಾತೃತ್ವದ ಬೆಸುಗೆಯ ಕೊಂಡಿಯಾಗಿ ನಿರಂತರವಾಗಿ ಯಾವುದೇ ಪ್ರಲೋಭಕ್ಕೆ ಆಸ್ಪದ ಕೊಡದ ರೀತಿಯಲ್ಲಿ ಜೀವನವನ್ನು ನಡೆಸಿ ಬೇರೆಯವರಿಗೆ ಕೂಡ ಮಾದರಿಯಾಗಿ ಬಾಳಿ ಎನ್ನುವ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಜೈಲರ್‍ಗಳಾದ ಸುನಂದ. ವಿ., ಶ್ಯಾಮ ಬಿದರಿ, ಶ್ರೀಮಂತಗೌಡ ಪಾಟೀಲ್ ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿಸಿಬ್ಬಂದಿಗಳು ಭಾಗವಹಿಸಿದರು. ಅಧೀಕಕ್ಷ ಎಂ.ಹೆಚ್. ಆಶೇಖಾನ್ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮೂಲಗೆ ನಿರೂಪಿಸಿದರು. ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಾರ ವಂದನಾರ್ಪಣೆ ಮಾಡಿದರು.