ಬೀದರ್: ಅ.10:ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಗೆ ಸೇರ್ಪಡೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕಾಗಿನೆಲೆ ಕನಕ ಗುರುಪೀಠದ ಧರ್ಮದರ್ಶಿಯೂ ಆದ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ರಘುನಾಥರಾವ ಮಲ್ಕಾಪುರೆ ದೂರಿದ್ದಾರೆ.ಗುರುವಾರ ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಮಹಿರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿಯೇ ಉಗ್ರಪ್ಪ ಅವರು ಆಡಿದ ಕುರುಬ ಸಮುದಾಯ ಹಿತದ ವಿರುದ್ಧದ ಹಾಗೂ ಜಾತಿ ದ್ವೇಷದ ಮಾತು ಉಗ್ರವಾಗಿ ಖಂಡಿಸುವುದಾಗಿ ಹೇಳಿದÀು.ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ ನಾಯಕ ಸಮಾಜದ ಹೊಟ್ಟೆ ಮೇಲೆ ಹೊಡೆಯಬೇಡಿ. ನಮ್ಮ ತಟ್ಟೆಯಲ್ಲಿನ ಅನ್ನ ಕಸಿದುಕೊಳ್ಳಬೇಡಿ ಎಂದು ಉಗ್ರಪ್ಪ ನೀಡಿದ ಹೇಳಿಕೆ ಅರ್ಥಹೀನ ಹಾಗೂ ತಲೆಬುಡವಿಲ್ಲದ್ದಾಗಿದೆ. ನಿಮ್ಮ ತಟ್ಟೆ ಅನ್ನ ನಾವ್ಯಾರೂ ಕಸಿಯುತ್ತಿಲ್ಲ. ಬದಲಾಗಿ ಪರಿಶಿಷ್ಟ ಪಂಗಡದಲ್ಲಿರುವ 52 ಜಾತಿಗಳ ಅನ್ನ ಕಸಿದುಕೊಂಡು ನೀವು ತಿನ್ನುತ್ತಿದ್ದಿರಿ ಎಂದು ಟಾಂಗ್ ನೀಡಿದ್ದಾರೆ.ನಾಯಕ ಮತ್ತು ಕುರುಬ ಸಮುದಾಯ ಎಸ್.ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. 1990ರಲ್ಲಿ ವಾಲ್ಮೀಕಿ ಸಮುದಯ ಮಾತ್ರ ಎಸ್.ಟಿಗೆ ಸೇರಿಸಲಾಯಿತು. ಕೆಲವು ಕಾರಣ ನೀಡಿ ಕುರುಬ ಸಮುದಾಯ ಸೇರ್ಪಡೆಯಾಗಿಲ್ಲ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ನಮ್ಮ ನ್ಯಾಯಬದ್ಧ ಬೇಡಿಕೆಗೆ ಕೇಂದ್ರ ಸ್ಪಂದಿಸುವ ಭರವಸೆ ಇದೆ ಎಂದು ಹೇಳಿದರು. ನಿಮ್ಮ ತಟ್ಟೆಯಲ್ಲಿ ಇದ್ದ ಅನ್ನ ಯಾರು ಕಸಿದುಕೊಳ್ಳುತ್ತಿಲ್ಲ. ನೀವು ಎಸ್ಟಿಯಲ್ಲಿ ಬರುವ 52 ಜಾತಿಯ ಅನ್ನವನ್ನು ನೀವು ಒಬ್ಬರೇ ತಿನ್ನುದ್ದಿರಿ.ಇದು ಎರಡು ಜಾತಿಗಳ ಮಧ್ಯೆ ಸಂಘರ್ಷಕ್ಕೆ ಅನುವು ಮಾಡಿಕೊಡುತ್ತಿದೆ. ಈ ಹೇಳಿಕೆ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಸದ್ಯ ರಾಜ್ಯದಲ್ಲಿ 15 ವಿಧಾನಸಭೆ ಕ್ಷೇತ್ರಗಳು, ಎರಡು ಲೋಕಸಭೆ ಕ್ಷೇತ್ರಗಳು ಎಸ್ಟಿ ಮೀಸಲು ಕ್ಷೇತ್ರಗಳಿದ್ದು, ಈ ಕ್ಷೇತ್ರದ ಲಾಭ ಪಡೆದುಕೊಳ್ಳುತ್ತಿರುವುದು ನಾಯಕ ಸಮಾಜದವರು. ಕುರುಬರು ಎಸ್ಟಿಗೆ ಸೇರಿಸಿದಂತೆ ಜನಸಂಖ್ಯೆ ಹೆಚ್ಚಳವಾಗಿ ಸಂವಿಧಾನ ಬದ್ಧವಾಗಿ ಮೀಸಲು ಪ್ರಮಾಣ ಸಹ ಹೆಚ್ಚಳವಾಗುತ್ತದೆ ಎಂದರು.ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವಲ್ಲಿ ಆಗುತ್ತಿರುವ ವಿಳಂಬದ ಕಾರಣ ಅನ್ಯಾಯವಾಗುತ್ತಿದೆ. ನ್ಯಾಯಕ್ಕಾಗಿ ಸಮುದಾಯ ನಿರಂತರ ಹೋರಾಟ ನಡೆಸುತ್ತಿದೆ. ಹಿಂದಿನ ಬೊಮ್ಮಾಯಿ ಸರ್ಕಾರ 2023ರ ಮಾರ್ಚ್ ನಲ್ಲಿ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಈ ಶಿಫಾರಸ್ಸು ಕೇಂದ್ರಕ್ಕೆ ಕಳುಹಿಸಲಿಲ್ಲ.ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವೇಳೆಸಿಎಂ ಆದ ಸಿದ್ಧರಾಮಯ್ಯ ಅವರು 2023ರ ಜುಲೈನಲ್ಲಿ ಈ ಸಂಬಂಧ ಕೇಂದ್ರಕ್ಕೆ ಶಿಫಾರಸ್ಸು ಸಹ ಮಾಡಿದ್ದಾರೆ. ಆದರೆ ಇದೇ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರು ಶಿಫಾರಸು ಕಳಿಸಿದ್ದು ಬೊಮ್ಮಾಯಿ ಹೊರತು ನಾನಲ್ಲ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಸಮುದಾಯದ ಹಿತದ ವಿಷಯ ಬಂದಾಗ ಸಿದ್ದರಾಮಯ್ಯ ಅವರಿಂದ ಈ ತರಹದ ಹೇಳಿಕೆ ನಾವ್ಯಾರೂ ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು.

























