
ಗದಗ,ಸೆ೩೦: ರೇಬಿಸ್ ಒಂದು ಮರಣಾಂತಿಕ ರೋಗವಾಗಿದ್ದು ರೇಬಿಸ್ ಸೋಂಕು ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ರೇಬಿಸ್ ಮಾರಣಾಂತಿಕವಾಗಿದ್ದರೂ ತಡೆಗಟ್ಟಬಹುದಾದ ರೋಗವಾಗಿದೆ. ರೇಬಿಸ್ ವೈರಸ್ಸಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು ನಾಯಿ ಕಡಿತ ಹಾಗೂ ಇತರ ಪ್ರಾಣಿಗಳ ಕಡಿತವನ್ನು ಅಲಕ್ಷ ಮಾಡದೆ ಕೂಡಲೇ ಅತ್ಯಗತ್ಯವಾಗಿ ರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.
ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವು ಬೆಟಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ತಾಲೂಕ ಆರೋಗ್ಯ ಅಧಿಕಾರಿಗಳ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕ ಮಟ್ಟದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದ ಡಾ. ಗಡಾದವರು, ಸಾಕು ನಾಯಿಗಳಿಗೆ ಆಯಾ ಮಾಲೀಕರು ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದು ಕೂಡ ತುಂಬಾ ಅತ್ಯಗತ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಮಧು ಮತಿ ಪಂಚಮುಖಿ ಅವರು ಮಾತನಾಡಿ, ಬೀದಿಯಲ್ಲಿ ಇರುವ ನಾಯಿಗಳಿಂದ ಮಕ್ಕಳು ಮತ್ತು ಸಾರ್ವಜನಿಕರು ಅಂತರವನ್ನು ಕಾಯ್ದುಕೊಳ್ಳಬೇಕು. ನಾಯಿ ಬೆಕ್ಕು ಇತರ ಪ್ರಾಣಿಗಳ ಕಡಿತವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ರೇಬಿಸ್ ನಿಂದಾಗುವ ಸಾವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದ್ದು ಇದಕ್ಕೆ ಇತರ ಇಲಾಖೆಗಳು ಸಹಭಾಗಿತ್ವ ಅವಶ್ಯವಿದೆ ಎಂದರು.
ಆಶಾ ಕಾರ್ಯಕರ್ತೆ ಶ್ರೀಮತಿ ಶಾಂತಾ ಹೊಟ್ಟಿ ಅವರು ಪ್ರಾರ್ಥಿಸಿದರು. ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಶ್ರೀಮತಿ ಯಾಸ್ಮಿನ್ ಬಾನು ವಡ್ಡಟ್ಟಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಶೃತಿ ಪವಾರ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ಸ್ವಪ್ನಾ ಕೋಳುರ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಟಿಗೇರಿ ಭಾಗದ ಎಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.























