
ಕಲಬುರಗಿ,ಡಿ.29-ಪಿಎಸ್‍ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ಜೊತೆಗೆ ಮತ್ತೆ ಕಿರಿಕ್ ಮಾಡಿಕೊಂಡಿದ್ದು, ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಧೀಕ್ಷಕಿ ಅನಿತಾ ಆರ್.ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಜೈಲು ಸಿಬ್ಬಂದಿ ಶನಿವಾರ ಬ್ಯಾರಕ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಜೈಲು ಸಿಬ್ಬಂದಿ ಜೊತೆಗೆ ಆರ್.ಡಿ.ಪಾಟೀಲ ತಗಾದೆ ತೆಗೆದ ಆರ್.ಡಿ.ಪಾಟೀಲ, “ನನ್ನ ಬ್ಯಾರಕ್ ತಪಾಸಣೆಗೆ ಅನುಮತಿ ಇದೆಯಾ ?, ಅನುಮತಿ ಇಲ್ಲದೇ ಬ್ಯಾರಕ್ ತಪಾಸಣೆಗೆ ಬಿಡಲ್ಲ ಎಂದು ವಾದಿಸಿದ್ದ. ಅಷ್ಟೇ ಅಲ್ಲ, “ನಿಮ್ಮ ಮೊಬೈಲ್ ಫೋನ್ ಕೊಡ್ರಿ, ನಾನು ಪ್ರೊಸಿಜರ್ ತೋರಿಸ್ತೀನಿ” ಎಂದು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರ್.ಡಿ.ಪಾಟೀಲ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.






















