
ಹುಳಿಯಾರು, ಜು. ೫- ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾದು ಹೋಗಲಿರುವ ಭಾರತಮಾಲಾ ಪರಿಯೋಜನೆಯಡಿ ೪-ಪಥಗಳ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆ (ಇಸಿ-೨೦) ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ನವರು ಕೆಂಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಹೊನ್ನಪ್ಪ ಮನವಿ ಸಲ್ಲಿಸಿದರು.
ಈ ಹೆದ್ದಾರಿಯು ಹಾಸನ, ಹುಳಿಯಾರು ಮತ್ತು ಹಿರಿಯೂರುಗಳನ್ನು ಸಂಪರ್ಕಿಸಲಿದೆ. ಮನವಿಯ ಪ್ರಕಾರ, ಹೊಸ ರಾಷ್ಟ್ರೀಯ ಹೆದ್ದಾರಿ (ಇಸಿ-೨೦) ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಲಕ ಹಾದು ಹೋಗುತ್ತಿದ್ದು, ಸುಮಾರು ೪೦ ರೈತರ ಜಮೀನುಗಳು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ಜಮೀನು ಗುರುತಿಸುವಿಕೆ ಮಾಹಿತಿ ನೀಡಿಲ್ಲ. ಭೂ ಸ್ವಾಧೀನಪಡಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೇ ನೋಟೀಸ್ ನೀಡಿದ್ದು ಬಿಟ್ಟರೆ ಮತ್ತೇನು ಪ್ರಗತಿಯಾಯಾಗಿಲ್ಲ. ಗೂಗಲ್ ನಕ್ಷೆಯಲ್ಲಿ ರಸ್ತೆ ಮಾರ್ಗವನ್ನು ಸೃಷ್ಟಿಸಿದ್ದು ಹೊರತುಪಡಿಸಿದರೆ, ಇದುವರೆಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಸರಿಯಾದ ಗಡಿ ಗುರುತಿಸದೆ ಸರ್ವೆ ನಂಬರ್‌ಗಳಿಗೆ ನೋಟಿಸ್ ನೀಡಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೆದ್ದಾರಿ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ರೈತರ ಜಮೀನು ಅಳೆಯಲು ಅವಕಾಶ ಕಲ್ಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿದ ಸಂಸದ ವಿ. ಸೋಮಣ್ಣ ಅವರು, ಈ ಯೋಜನೆಗೆ ತಾವೇ ಗ್ರೀನ್ ಸಿಗ್ನಲ್ ನೀಡಿದ್ದಾಗಿ ತಿಳಿಸಿದರು. ಕೆಲವೊಂದು ಯೋಜನೆಗಳು ಮಾಡುವ ಸಂದರ್ಭದಲ್ಲಿ ಕೆಲವರಿಗೆ ಸಮಸ್ಯೆ ಆಗುವುದು ಸಹಜ. ಈ ಬಗ್ಗೆ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು, ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.