ಶೀಘ್ರ ಪಡಿತರ ಕಾರ್ಡ್ ಪರಿಷ್ಕರಣೆ

ಬೆಂಗಳೂರು,ಆ.೧೮-ವಿಧಾನಸಭೆಯ ಅಧಿವೇಶನ ಪೂರ್ಣಗೊಂಡ ಕೂಡಲೇ ರಾಜ್ಯದಲ್ಲಿ ಪಡಿತರ ಕಾರ್ಟ್ ಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಆಹಾರ,ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಅವರು ಮೇಲ್ಮನೆಗೆ ತಿಳಿಸಿದರು.


ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಡಾ.ಯತೀಂದ್ರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ರಾಜ್ಯದಲ್ಲಿ ೧೫ ಲಕ್ಷ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.


ಹೊಸದಾಗಿ ೩.೨೭ ಲಕ್ಷ ಮಂದಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ.ಎರಡು ವರ್ಷಗಳು ಕಳೆದಿದ್ದರೂ ಇದುವರೆಗೂ ಅರ್ಜಿದಾರ ರಿಗೆ ಕಾರ್ಡ್ ವಿತರಣೆ ಮಾಡಲಾಗಿಲ್ಲ ಎಂದು ಹೇಳಿದರು.


ದೇಶದಲ್ಲಿ ಅತಿ ಹೆಚ್ಚು ಶೇ.೭೪ ಮಂದಿ ಬಿಪಿಎಲ್ ಕಾರ್ಡ್ ದಾರರು ನಮ್ಮ ರಾಜ್ಯದಲ್ಲಿದ್ದಾರೆ,ಬೇರೆ ರಾಜ್ಯಗಳು ಶೇ.೫೦ರಷ್ಟು ದಾಟಿಲ್ಲ,ನಮ್ಮ ರಾಜ್ಯದಲ್ಲಿ ಅರ್ಹತೆಯಿಲ್ಲದ ೧೫ ಲಕ್ಷ ಬಿಪಿಎಲ್ ಕಾರ್ಡ್ ದಾರರಿದ್ದಾರೆ,ಅವುಗಳನ್ನು ಪರಿಷ್ಕರಣೆ ಮಾಡಿ ಎಪಿಎಲ್ ಕಾರ್ಡ್ ನೀಡಿದರೆ ಹೊಸದಾಗಿ ೩.೨೭ ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ಕೊಡುವುದು ತೊಂದರೆಯಾಗುವುದಿಲ್ಲ ಎಂದು ಹೇಳಿದರು