Home ಜಿಲ್ಲೆ ಶೌರ್ಯದ ಸಂಕೇತ ರಾಣಿ ಚೆನ್ನಮ್ಮ: ಬಾಬುರಾವ್ ಮಹಾರಾಜ

ಶೌರ್ಯದ ಸಂಕೇತ ರಾಣಿ ಚೆನ್ನಮ್ಮ: ಬಾಬುರಾವ್ ಮಹಾರಾಜ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೨೬: ತಿಕೋಟಾ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಿತ್ತೂರು ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ್ ಮಹಾರಾಜ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಸಣ್ಣ ಸಂಸ್ಥಾನವಾದ ಕಿತ್ತೂರಿನ ರಾಣಿಯಾಗಿ ಅಧಿಕಾರ ವಹಿಸಿಕೊಂಡು ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿದ ಸ್ವಾಭಿಮಾನಿ ಮಹಿಳೆಯಾಗಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರನ್ನು ಸೋಲಿಸಿದ ಮೊದಲ ಮಹಿಳಾ ಹೋರಾಟಗಾರ್ತಿಯಾಗಿ ಚೆನ್ನಮ್ಮನವರು ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಧೈರ್ಯ, ಶೌರ್ಯ ಹಾಗೂ ಸ್ವಾಭಿಮಾನದ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಚೆನ್ನಮ್ಮನವರ ಜಯಂತಿಯನ್ನು ವಿಜಯೋತ್ಸವದ ದಿನವನ್ನಾಗಿ ಆಚರಿಸುತ್ತಿರುವುದು ಯುವಜನತೆಯಲ್ಲಿ ಧೈರ್ಯ, ಸಾಹಸ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸದಾಶಿವ ಪೂಜಾರಿ, ಪ್ರಭು ಅವಟಿ, ನಿಕಟಪೂರ್ವ ಅಧ್ಯಕ್ಷರಾದ ಸೋಮಶೇಖರ ಜತ್ತಿ, ಸದಾಶಿವ ಮಂಗಸೂಳಿ, ಗುಂಡು ನಾವಿ, ವಿದ್ಯಾ ಸವನಹಳ್ಳಿ, ಬಿ.ಜಿ. ವಿಭೂತಿ, ಗೀತಾ ಕುಲಕರ್ಣಿ, ಆರ್.ಕೆ. ಬಿಸ್ನಾಳ, ಎಂ.ಆರ್. ಕೊಡವಕ್ಕಲಿಗ, ಅನಿಲ್ ಪೂಜಾರಿ ಆಲ್ಗೂರ, ಗುರುಮಾತೆ ಸಣ್ಣಕ್ಕ, ಗುರುಮಾತೆ ಸುನೀತಾ ಭಜಂತ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕುಮಾರಿ ಅಮೋದಿನಿ ಮೇಲಿನಕೇರಿ, ಸ್ವಾತಿ ಕೊರವಾರ, ಸದಾಶಿವ ಪೂಜಾರಿ, ರಾಜು ತಾಳಿಕೋಟಿ ಹಾಗೂ ಮುಖ್ಯಶಿಕ್ಷಕ ಎಂ.ಕೆ. ಬಗಲಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಂ.ಕೆ. ಬಗಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕೆ. ಬಿರಾದರ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಚಾವರ ಸ್ವಾಗತಿಸಿದರು. ಎಲ್.ಡಿ. ಜಮಾದಾರ್ ವಂದಿಸಿದರು.