
ಯಾದಗಿರಿ:ಮೇ.೨೯: ಜಿಲ್ಲೆಯ ಶಹಪುರ ತಾಲ್ಲೂಕಿನ ದೋರನಹಳ್ಳಿ ಪಟ್ಟಣದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿವೆ. ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ತಾಂತ್ರಿಕ ದೋಷಗಳು, ಕಳಪೆ ಸಾಮಗ್ರಿಗಳ ಬಳಕೆ ಹಾಗೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಆರಂಭದಿAದಲೇ ಪ್ರಶ್ನೆಗಳು ಎದ್ದಿದ್ದರೂ, ಸಂಬAಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರ ಹೇಳಿಕೆಗಳು ಹಾಗೂ ಸಾಮಾಜಿಕ ಹೋರಾಟಗಾರರ ಮಾಹಿತಿಗಳ ಆಧಾರದ ಮೇಲೆ ಸಂಜೆವಾಣಿ ಕನ್ನಡ ದಿನಪತ್ರಿಕೆ ನಿರಂತರವಾಗಿ ವರದಿಗಳನ್ನು ಪ್ರಕಟಿಸುತ್ತಿದ್ದು, ಕಟ್ಟಡ ಕಾಮಗಾರಿಯ ಲೋಪದೋಷಗಳನ್ನು ಒಂದೊAದಾಗಿ ಬೆಳಕಿಗೆ ತರುತ್ತಲೇ ಬಂದಿದೆ. ಸಿಮೆಂಟ್ ಮಿಶ್ರಣದ ಗುಣಮಟ್ಟ ಕಳಪೆಯಾಗಿರುವುದು, ತಾಂತ್ರಿಕ ಮಾನದಂಡಗಳನ್ನು ಪಾಲಿಸದೇ ಕೆಲಸ ನಡೆಯುತ್ತಿರುವುದು ಸೇರಿದಂತೆ ಹಲವು ಅಂಶಗಳು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿವೆ.
“ಜನರ ಆರೋಗ್ಯ ಸೇವೆಗೆ ನಿರ್ಮಾಣವಾಗುತ್ತಿರುವ ಆಸ್ಪತ್ರೆಯೇ ಸುರಕ್ಷಿತವಾಗಿರದಿದ್ದರೆ ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಅಧಿಕಾರಿಗಳು ತಕ್ಷಣ ಹಸ್ತಕ್ಷೇಪ ಮಾಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು” ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದಕ್ಕೂ ಮಧ್ಯೆ, ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಕಳಪೆ ಕಾಮಗಾರಿಯ ಬಗ್ಗೆ ವರದಿ ಮಾಡಿದ ಪತ್ರಕರ್ತರ ಮೇಲೂ ಪರೋಕ್ಷ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸ್ಥಳೀಯರ ಪ್ರಕಾರ, ಪ್ರಥಮ ಗುತ್ತಿಗೆದಾರ ತಾಯಪ್ಪ ಯಾದವ್ (ಕಾಳೆಬೆಳಗುಂದಿ) ಅವರು, ಕೆಲವು ರಾಜಕೀಯ ಮುಖಂಡರ ಮೂಲಕ ಕರೆ ಮಾಡಿಸಿ “ಈ ವಿಷಯವನ್ನು ಇಲ್ಲಿಗೇ ಮುಚ್ಚಿಹಾಕಿ”, “ಇನ್ನಷ್ಟು ಸುದ್ದಿ ಮಾಡಬೇಡಿ” ಎಂದು ಒತ್ತಡ ಹೇರುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ತಣ್ಣಗಾಗಿಸುವ ಉದ್ದೇಶದಿಂದ ಬೇರೆ ವ್ಯಕ್ತಿಗಳ ಮೂಲಕ ಸಮಾಧಾನಪಡಿಸುವ ಹಾಗೂ ಪ್ರಕರಣವನ್ನು ಮಸುಕುಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. “ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಗುಣಮಟ್ಟದ ಬಗ್ಗೆ ಪ್ರಶ್ನೆ ಕೇಳಿದವರನ್ನೇ ಟಾರ್ಗೆಟ್ ಮಾಡುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ಸತ್ಯವನ್ನು ಬಹಿರಂಗಪಡಿಸುವವರನ್ನು ಬೆದರಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುಃಖಕರ ಬೆಳವಣಿಗೆಯಾಗಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಲ್ಲದೆ, ಕಾಮಗಾರಿಯ ಕುರಿತು ಅನೇಕ ಬಾರಿ ವರದಿಗಳು ಪ್ರಕಟವಾಗಿದ್ದರೂ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. “ಅಧಿಕಾರಿಗಳು ಎಲ್ಲವನ್ನೂ ನೋಡಿದರೂ ನೋಡದಂತೆ ವರ್ತಿಸುತ್ತಿರುವುದು ವಿಪರ್ಯಾಸ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರವು ಗ್ರಾಮೀಣ ಭಾಗದ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸಬೇಕಿರುವ ಪ್ರಮುಖ ಯೋಜನೆಯಾಗಿರುವುದರಿಂದ, ಕೂಡಲೇ ಉನ್ನತ ಮಟ್ಟದ ತಾಂತ್ರಿಕ ತಂಡದಿAದ ಸಮಗ್ರ ಪರಿಶೀಲನೆ ನಡೆಸಿ, ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿ, ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





























