
ಬೀದರ್: ಮೇ.18:ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಗುಣಮಟ್ಟದ ಅಡಿಪಾಯ ಶಿಕ್ಷಣ ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಚಿಟ್ಟಾ ಕ್ರಾಸ್‍ನಲ್ಲಿ ಇರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಯ ಬಳಿ ಶನಿವಾರ ಬ್ರೈಟ್ ಸ್ಟಾರ್ ಕಿಡ್ಸ್ ಇಂಟರ್‍ನ್ಯಾಷನಲ್ ಪ್ರಿ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದರು.
ಅಡಿಪಾಯ ಭದ್ರವಾಗಿದ್ದರೆ ಹೇಗೆ ಕಟ್ಟಡ ಬಲಶಾಲಿ ಆಗಿರುತ್ತದೆಯೋ, ಹಾಗೆಯೇ ಅಡಿಪಾಯ ಶಿಕ್ಷಣ ಚೆನ್ನಾಗಿದ್ದರೆ ಮಕ್ಕಳ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಸಂಸ್ಕಾರಯುತ ಶಿಕ್ಷಣ ಜರೂರಿಯಾಗಿದೆ ಎಂದರು.
ಪ್ರಸ್ತುತ ಹೆಚ್ಚಿನ ಮಕ್ಕಳು ಮೊಬೈಲ್ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ. ಅತಿಯಾದ ಮೊಬೈಲ್ ಬಳಕೆ ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್‍ನಿಂದ ದೂರ ಇರಿಸಬೇಕು ಎಂದು ಸಲಹೆ ಮಾಡಿದರು.
ಮಕ್ಕಳ ಮೊಬೈಲ್ ಚಟ ಬಿಡಿಸುವುದಕ್ಕಾಗಿಯೇ ಶಾಲೆಯಲ್ಲಿ ‘ಮಾಂಟೆಸ್ಸರಿ ಪ್ರಯೋಗ ಶಾಲೆ’ ನಿರ್ಮಿಸಿರುವುದು ಉತ್ತಮ ಬೆಳವಣಿಗೆ. ಶಾಲೆ ಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.
ನಗರದ ಮಕ್ಕಳಿಗೆ ಸಂಸ್ಕಾರಯುತವಾದ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ನೀಡಲು ಶಾಲೆ ಆರಂಭಿಸಲಾಗಿದೆ. ಮಕ್ಕಳ ಭವಿಷ್ಯ ಪ್ರಕಾಶಮಯ ಆಗಿಸುವುದು ಶಾಲೆಯ ಧ್ಯೇಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಡಾ. ಸುನೀಲಕುಮಾರ ಮೂಲಗೆ ತಿಳಿಸಿದರು.
ಹಲಬರ್ಗಾ ಮಠದ ಪೀಠಾಧಿಪತಿ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕೆ.ಆರ್.ಇ. ನ್ಯಾಸ್ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರು ಮುಖ್ಯ ಅತಿಥಿಯಾಗಿದ್ದರು. ಹಿರಿಯ ನ್ಯಾಯವಾದಿ ವಿಶ್ವನಾಥ ಮೂಲಗೆ, ಕಲಾವತಿ ಮೂಲಗೆ, ಶಾಲೆಯ ಉಪಾಧ್ಯಕ್ಷ ರಾಜಕುಮಾರ ಮೂಲಗೆ, ಕಾರ್ಯದರ್ಶಿ ಡಾ. ರಾಧಿಕಾ ಮೂಲಗೆ, ಜಂಟಿ ಕಾರ್ಯದರ್ಶಿ ಸಾಗರ್ ಮೂಲಗೆ, ನಿರ್ದೇಶಕರಾದ ಅನಿಲಕುಮಾರ ಮೂಲಗೆ, ನವನಾಥ ಮೂಲಗೆ, ಶಾಂತಕುಮಾರ ಮೂಲಗೆ, ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ, ಪ್ರಮುಖರಾದ ದತ್ತಾತ್ರಿ ಮೂಲಗೆ, ರಮೇಶ ಪ್ರಭಾ, ಧನರಾಜ ಪಾಟೀಲ, ಅಶೋಕ್ ಹೆಬ್ಬಾಳೆ, ಸುನೀಲಕುಮಾರ ಗಂದಿಗುಡಿ, ಉದಯಕುಮಾರ ಮೂಲಗೆ, ಬಸಯ್ಯ ಸ್ವಾಮಿ, ರಾಜೇಂದ್ರ ಪಾಟೀಲ, ಗೋವಿಂದಸಿಂಗ್ ಠಾಕೂರ್, ಈಶ್ವರಯ್ಯ ಕೋಡಂಬಲ್ ಮತ್ತಿತರರು ಇದ್ದರು.






















