
ಕೊರಟಗೆರೆ, ಡಿ. ೨೬- ಮಕ್ಕಳಿಗಾಗಿ ಪೋಷಕರು ಹಣ ಸಂಪಾದಿಸುವುದಕ್ಕಿಂತ, ಸರಿಯಾದ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥಸ್ವಾಮೀಜಿ ಕರೆ ನೀಡಿದರು. ಪಟ್ಟಣದ ಹೊರವಲಯ ದಲ್ಲಿರುವ ಜೆ.ಕೆ.ಮೆಮೋರಿಯಲ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳನ್ನು ಧರ್ಮ ಮತ್ತು ಸಂಸ್ಕಾರದ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಪೋಷಕರು ಮತ್ತು ಶಾಲೆಗಳ ಮೇಲಿದೆ. ಆಟ?ಪಾಠಗಳಿಂದ ವಂಚಿತ ಮಕ್ಕಳ ಜೀವನ ಶೂನ್ಯವಾಗುತ್ತದೆ. ಇಂದಿನ ಮಕ್ಕಳು ಅತ್ಯಂತ ಬುದ್ಧಿವಂತರು. ಅವರನ್ನು ಕೇವಲ ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಸುವುದಷ್ಟೇ ಅಲ್ಲ, ಸಂಸ್ಕಾರಯುತ ಶಿಕ್ಷಣ ನೀಡುವುದು ಕೂಡ ಅತ್ಯವಶ?ಯ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಂ ಮಾತನಾಡಿ, ಪ್ರಪಂಚದ ಅತ್ಯುತ್ತಮ ಗ್ರಂಥವೆಂದರೆ ಭಗವದ್ಗೀತೆ. ಇದು ಮಕ್ಕಳಿಗೆ ಜೀವನದ ಅನುಭವ ಬೋಧನೆ ನೀಡುತ್ತದೆ. ಮಕ್ಕಳಲ್ಲಿ ಉತ್ತಮ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಆರೋಗ್ಯವಂತ ಮಗುವಿನಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಆರ್.ಮಲ್ಲಿಕಾರ್ಜುನ್ ಮಾತನಾಡಿ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಧ್ಯೇಯದಿಂದ ಸಂಸ್ಥೆಯನ್ನುಸ್ಥಾಪಿಸಿ ಬೆಳೆಸಲಾಗಿದೆ. ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರವೀಂದ್ರ ಭಾರತಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷೆ ಉಮಾ ಮಹೇಶ್ವರಿ, ಕಾರ್ಯದರ್ಶಿ ಡಾ.ಶೋಭಾ ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ನವೀನ್‌ಕುಮಾರ್, ಖಜಾಂಚಿ ಆದಿ ರಮೇಶ್, ಸಲಹೆಗಾರರಾದ ಸುಧಾಮಣಿ, ಪ.ಪಂ. ಸದಸ್ಯ ಕೆ.ಎನ್ ಲಕ್ಷ್ಮಿನಾರಾಯಣ್, ನಿವೃತ್ತ ಪ್ರಾಚಾರ್ಯರಾದ ಕೆ.ಎಸ್. ಈರಣ್ಣ, ಪ್ರಾಚಾರ್ಯ ಸುಭಾಷ್, ಮತ್ತಿತರರು ಭಾಗವಹಿಸಿದ್ದರು.



























