
ನವದೆಹಲಿ,ಡಿ.೩- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾಳೆ ಭಾರತಕ್ಕೆ ಆಗಮಿಸಲಿದ್ದು ಉಭಯ ದೇಶಗಳ ನಡುವೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ಆತ್ಯಾಧುನಿಕ ಸುಖೋಯ್ -೫೭ ಯುದ್ದ ವಿಮಾನಗಳು ಮತ್ತು ಹೆಚ್ಚುವರಿ ಎಸ್-೪೦೦ ಕ್ಷಿಪಣಿ ಖರೀದಿಸುವ ಪ್ರಸ್ತಾಪವೂ ಇದೆ ಎನ್ನಲಾಗಿದೆ.
ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ಉತ್ಪನ್ನಗಳ ಮೇಲೆ ಅತ್ಯಧಿಕ ಸುಂಕ ವಿಧಿಸಿದೆ, ಜೊತೆಗೆ ರಷ್ಯಾದಿಂದ ತೈಲ ಖರೀದಿ ಮಾಡದಂತೆ ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಭಾರಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ, ಈ ಹಿನ್ನೆಲೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆ ಎರಡು ದಿನಗಳ ಭಾರತ ಭೇಟಿಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಾಳೆ ಭಾರತಕ್ಕೆ ಭೇಟಿ ನೀಡಲಿದ್ದು ಭೇಟಿಯ ವೇಳೆ ರಕ್ಷಣಾ ವ್ಯವಸ್ಥೆಗಳ ಕುರಿತಾದ ಚರ್ಚೆ ಸೇರಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದೊಂದಿಗೆ ನಿರ್ಣಾಯಕ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಅಧಿಕೃತ ಮುದ್ರೆ ನೀಡುವ ಸಾಧ್ಯತೆ ಇದೆ. ರಷ್ಯಾದ ಸಂಸತ್ತಿನ ಕೆಳಮನೆಯಾದ ಸ್ಟೇಟ್ ಡುಮಾದಲ್ಲಿ ಭಾರತ ಭೇಟಿಗೂ ಮುನ್ನ ಲಾಜಿಸ್ಟಿಕ್ ಬೆಂಬಲ ವಿನಿಮಯ ಒಪ್ಪಂದ ಅನುಮೋದಿಸಿದೆ.
ಭಾರತ ಮತ್ತು ರಷ್ಯಾ ನಡುವೆ ಮಿಲಿಟರಿ ಘಟಕಗಳು, ಯುದ್ಧನೌಕೆಗಳು ಮತ್ತು ವಿಮಾನಗಳ ನಿಯೋಜನೆಗೆ ಕಾರ್ಯವಿಧಾನ ನಿಗದಿಪಡಿಸುವಿಕೆ ಇಂಧನ ಮತ್ತು ನಿರ್ವಹಣೆ, ಸರಬರಾಜು ಮತ್ತು ಕಾರ್ಯಾಚರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಹತ್ವದ ಮಾತುಕತೆ ನಡೆಯಲಿದ್ದು ಇದು ಸಹಜವಾಗಿ ಅಮೇರಿಕಾದ ಚಿತ್ತ ಭಾರತದತ್ತ ಬೀಳುವಂತೆ ಮಾಡಿದೆ
ರಷ್ಯಾದ ಸಂಸತ್ತಿನಲ್ಲಿ ಅಲ್ಲಿನ ಸ್ಪೀಕರ್ ವ್ಯಾಚೆಸ್ಲಾವ್ ವೊಲೊಡಿನ್, ಭಾರತದೊಂದಿಗೆ ವಿವಿಧ ವಿಷಯಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ಸಂಸತ್ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ. ಇದು ಉಭಯ ದೇಶಗಳ ನಡುವೆ ಪರಸ್ಪರ ಸಹಕಾರ ಮತ್ತು ಬಾಂಧವ್ಯ ಹೆಚ್ಚಿಸಲು ಮತ್ತಷ್ಟು ನೆರವಾಗಲಿದೆ ಎಂದು ಹೇಳಲಾಗಿದೆ
ಭಾರತ-ರಷ್ಯಾ ನಡುವೆಜಂಟಿ ಮಿಲಿಟರಿ ವ್ಯಾಯಾಮಗಳು, ತರಬೇತಿ ಕಾರ್ಯಾಚರಣೆಗಳು, ಮಾನವೀಯ ನೆರವು ಕಾರ್ಯಾಚರಣೆಗಳು, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತು ಪರಿಹಾರ ಪ್ರಯತ್ನಗಳು ಮತ್ತು ಎರಡೂ ಸರ್ಕಾರಗಳು ಪರಸ್ಪರ ಅನುಮೋದಿಸಿದ ಯಾವುದೇ ಇತರ ಪರಿಸ್ಥಿತಿಯಲ್ಲಿ ಒಪ್ಪಂದ ಮಾಡಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳು ಸೇರಿವೆ ಎಂದು ತಿಳಿಸಲಾಗಿದೆ.
ಡುಮಾದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಟಿಪ್ಪಣಿಯು ಅನುಮೋದನೆಯು ಪರಸ್ಪರರ ವಾಯುಪ್ರದೇಶಕ್ಕೆ ಪ್ರವೇಶವನ್ನು ಸರಳಗೊಳಿಸುತ್ತದೆ ಮತ್ತು ರಷ್ಯಾದ ಮತ್ತು ಭಾರತೀಯ ನೌಕಾ ಹಡಗುಗಳು, ರಷ್ಯಾದ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ
ಮಹತ್ವದ ಒಪ್ಪಂದ ನಿರೀಕ್ಷೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ ವೇಳೆ ಎಸ್-೪೦೦. ಸು-೫೭ ಯುದ್ದ ವಿಮಾಣ ಖರೀದಿಸುವ ಪ್ರಮುಖ ವಿಷಯಗಳನ್ನು ಒಳಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇದರ ಜೊತೆಗೆ ರಷ್ಯಾದಿಂದ ಭಾರತ, ಯಾವುದೇ ಕಾರಣಕ್ಕು ತೈಲ ಖರೀದಿ ಮಾಡದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ನಡುವೆ ಪುಟಿನ್ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ

































