Home ಜಿಲ್ಲೆ ರಾಯಚೂರಿನಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ: ಶಾಮರಾವ್ ಘಾಟಗೆ

ರಾಯಚೂರಿನಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ: ಶಾಮರಾವ್ ಘಾಟಗೆ

ಸಂಜೆ ವಾಣಿ ವಾರ್ತೆ |
ಜಮಖಂಡಿ: ರಾಯಚೂರು ಜಿಲ್ಲೆಯಲ್ಲಿ ದಲಿತ ಯುವಕರು ಹಾಗೂ ಯುವತಿಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಹಾಗೂ ಖಂಡನೀಯ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಗವಾರ ಬಣದ ರಾಜ್ಯ ಸಂಚಾಲಕ ಶಾಮರಾವ್ ಘಾಟಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು-ಮೂರು ವರ್ಷಗಳ ಘಟನೆಗಳನ್ನು ಗಮನಿಸಿದರೆ ಪ್ರಸಾದ ಮಾನಿಮಿ ಅವರ ಕೊಲೆ, ಪತ್ರಕರ್ತ ಬಸವರಾಜ್ ಕಿರಿಕಿರಿ ಅವರ ಹತ್ಯೆ, ಆಗಸ್ಟ್ ೪ರಂದು ಭೀಮಾನಂದನ ಬರ್ಬರ ಹತ್ಯೆ ಹಾಗೂ ಆಗಸ್ಟ್ ೧೯ರಂದು ದಲಿತ ಯುವತಿ ಅಶ್ವಿನಿ ಚಲವಾದಿ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಿವೆ. ಇಂತಹ ಘಟನೆಗಳು ಸಮಾಜದಲ್ಲಿ ಜಾತಿವಾದಿ ಹಾಗೂ ಕೋಮುವಾದಿ ಮನೋಭಾವಗಳು ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತಿವೆ ಎಂದು ಆರೋಪಿಸಿದರು.

ದಲಿತ ಯುವಕರು ಹಾಗೂ ಯುವತಿಯರ ಮೇಲೆ ನಡೆಯುತ್ತಿರುವ ಬರ್ಬರ ಹತ್ಯೆ, ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ಪ್ರಜ್ಞಾವಂತ ಸಮಾಜ ಯಾವುದೇ ಕಾರಣಕ್ಕೂ ಸಹಿಸಬಾರದು. ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೃತ ಭೀಮಾನಂದನ ಕುಟುಂಬ ಹಾಗೂ ಅಶ್ವಿನಿ ಚಲವಾದಿ ಅವರ ಕುಟುಂಬಗಳಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಸಾಂತ್ವನ ಹೇಳಬೇಕು. ಕುಟುಂಬಗಳಿಗೆ ಧೈರ್ಯ ತುಂಬಿ, ಅಗತ್ಯ ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ಭೇದಭಾವವಿಲ್ಲದೆ ದಲಿತ ಸಮುದಾಯದ ಮತಗಳನ್ನು ಕೇಳುವ ಜನಪ್ರತಿನಿಧಿಗಳು, ಚುನಾವಣೆ ಮುಗಿದ ಬಳಿಕ ದಲಿತರ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ದಲಿತರ ಮೇಲೆ ದೌರ್ಜನ್ಯ ಅಥವಾ ಕೊಲೆ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ನ್ಯಾಯ ದೊರಕಿಸಿಕೊಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿಭಾಯಿಸಬೇಕು ಎಂದು ಹೇಳಿದರು.

ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆದ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವುದರ ಜೊತೆಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತರ ಮೇಲಿನ ದೌರ್ಜನ್ಯ ಹಾಗೂ ಸರಣಿ ಹತ್ಯೆಗಳಿಗೆ ಕಡಿವಾಣ ಹಾಕದಿದ್ದರೆ, ರಾಯಚೂರಿನಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಮರಾವ್ ಘಾಟಗೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಹೇಶ ಕೋಳಿ, ಭೀಮಶಿ ನಡವಿಮನಿ, ಪರಶುರಾಮ ಮಾಂಗ, ನದೀಮ ಗೋಠೆ, ರಮೇಶ ಪೂಜಾರಿ, ಅಬುಬಕ್ಕರ ಕುಡಚಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.