
ಬೆಂಗಳೂರು,ಮೇ.೧೯– ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ೯೪ನೇ ಜನ್ಮದಿನವನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಜಕ್ಕೂರು ವಾರ್ಡ್‌ನ ವೆಂಕಟೇಶಪುರದಲ್ಲಿ ನಡೆದ ಕಾರ್ಯಕ್ರಮ ಜನಸೇವೆಯ ಹಬ್ಬದಂತಾಗಿದ್ದು, ನೂರಾರು ಜನರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ಬ್ಯಾಟರಾಯನಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎನ್. ವೇಣುಗೋಪಾಲ್ ಹಾಗೂ ಗಂಗೋತ್ರಿ ಸಿ.ಬಿ. ಕುಶಾಲ್‌ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಸಹಾಯಧನ, ಪೌರಕಾರ್ಮಿಕರಿಗೆ ದಿನಸಿ ಕಿಟ್, ಬಡ ಮಹಿಳೆಯರಿಗೆ ಕುಕ್ಕರ್ ಮತ್ತು ಹಾಟ್‌ಬಾಕ್ಸ್‌ಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿ, ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರು ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ ಸೇರಿದಂತೆ ಹಲವು ಸಾಮಾನ್ಯ ಆರೋಗ್ಯ ಪರೀಕ್ಷೆಗಳನ್ನು ನಡೆಸಿದರು. ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನೂ ನೀಡಲಾಯಿತು. ಶಿಬಿರದಲ್ಲಿ ೫೦೦ಕ್ಕೂ ಹೆಚ್ಚು ಜನರು ಪಾಲ್ಗೊಂಡು ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಂಡರು.
ಇದೇ ವೇಳೆ ಲಯನ್ಸ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೪೦ ಯುನಿಟ್ ರಕ್ತ ಸಂಗ್ರಹವಾಗಿದ್ದು, ಯುವಕರು ಉತ್ಸಾಹದಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯ ಈ. ಕೃಷ್ಣಪ್ಪ, ಎಚ್.ಎಂ. ರಮೇಶ್‌ಗೌಡ, ಎನ್‌ಡಿಎ ಮುಖಂಡ ಕೆ.ಎನ್. ಚಕ್ರಪಾಣಿ, ಜೆಡಿಎಸ್ ಮುಖಂಡರಾದ ಎಸ್.ಎನ್. ಆನಂದಮೂರ್ತಿ, ಆಂಜನೇಗೌಡ, ವಿ. ಸುರೇಶ್, ಗೋವಿಂದೇಗೌಡ, ಕುಮಾರ್, ರಂಜಿತ್, ಮಧು, ದಾಸಪ್ಪ, ವಿಜಯಕುಮಾರ್, ಅಶ್ವಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.





























