ಹುಮನಾಬಾದ :ಸೆ.1: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣ ಸಂಪೂರ್ಣವಾಗಿ ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ.
ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ ಸೊಳ್ಳೆ ಕಾಟ ಕೂಡಾ ಹೆಚ್ಚಾಗಿದ್ದು, ಆಸ್ಪತ್ರೆ ಆವರಣದಲ್ಲಿಯೇ ನಾಯಿ ಮೃತಪಟ್ಟಿದೆ. ಇದರಿಂದಾಗಿ ದುರ್ವಾಸನೆ ಬೀರುತ್ತಿದೆ. ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯ ಸ್ವಚ್ಛತೆಗಾಗಿ ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆ ಸೌಲಭ್ಯ ವಂಚಿತವಾಗಿ ಸಮಸ್ಯೆಗಳ ಆಗಾರವಾಗಿದೆ. ಸಮಸ್ಯೆಗಳನ್ನು ಬಗೆಹರಿಸಬೇಕಾದ ವೈದ್ಯಾಧಿಕಾರಿಗಳೇ ನಮಗೇನು ಸಂಬಂಧ ಎನ್ನುವಂತೆ ವರ್ತಿಸುತ್ತಿರುವುದು ನೋವಿನ ಸಂಗತಿಯಾಗಿದೆ.
ಸಾರ್ವಜನಿಕರ ಹಾಗೂ ರೋಗಿಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಆಸ್ಪತ್ರೆಯ ಆವರಣ ಸ್ವಚ್ಚತೆ ಮಾಡಬೇಕು. ವಿಳಂಬವಾದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಾಗುವುದು ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ತಾಲೂಕ ಅಧ್ಯಕ್ಷ ಗಣಪತಿ ಅಷ್ಟೋರೆ ಎಚ್ಚರಿಕೆ ನೀಡಿದ್ದಾರೆ.






















