ಎಚ್‍ಐವಿ ಸೋಂಕು ತಡೆಗೆ ಜನಸಹಕಾರ ಅಗತ್ಯ : ಅರವಿಂದ ಕುಲಕರ್ಣಿ

ಬೀದರ:ನ.20:ಎಚ್.ಐ.ವಿ. ಸೋಂಕಿನ ಹೊಸ ಪ್ರಕರಣಗಳನ್ನು ಸೊನ್ನೆಗೆ ತರುವ ಗುರಿ ಸಾಧಿಸಲು ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದು ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಅರವಿಂದ ಕುಲಕರ್ಣಿ ಹೇಳಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ (ಏSಂPS) ಹಾಗೂ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ, ಬೀದರ ಅವರ ಸಂಯುಕ್ತಾಶ್ರಯದಲ್ಲಿ ಮನ್ನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಎಚ್‍ಐವಿ ಹರಡುವ ವಿಧಾನ ಮತ್ತು ತಡೆಯುವಿಕೆ ಕುರಿತು ಸರಳವಾಗಿ ವಿವರಿಸಿದ ಅವರು,
“ಎಲ್ಲೆಡೆಯೂ ಆರೋಗ್ಯ, ಎಲ್ಲರಿಗೂ ಆರೋಗ್ಯ” ಎಂಬ ಧ್ಯೇಯದೊಂದಿಗೆ ಉಚಿತ ಆರೋಗ್ಯ ತಪಾಸಣೆಗಳು ನಡೆಯುತ್ತಿವೆ. ಅರ್ಹರು ಪರೀಕ್ಷೆಗೆ ಮುಂದಾಗಬೇಕು” ಎಂದು ಹೇಳಿದರು.
ಎಚ್‍ಐವಿ ಸೋಂಕಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳಿಂದಾಗಿ ಕಂಡುಬರುವ ಕಳಂಕ ಮತ್ತು ತಾರತಮ್ಯ ಜನಜಾಗೃತಿಯಿಂದ ಮಾತ್ರ ನಿವಾರಣೆಯಾಗುತ್ತದೆ ಎಂದು ಅವರು ತಿಳಿಸಿದರು.

“ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತ – ಸೋಂಕಿತರು ಹಿಂಜರಿಯಬಾರದು,” ಎಂದು ಮನವಿ ಮಾಡಿದರು.

ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕರಾದ ಆನಂದ ಪೌಲ್ ಅವರು ಮಾತನಾಡಿ,
ಸಂಸ್ಥೆಯು ಸರ್ಕಾರದ ಸಹಕಾರದಿಂದ ಸೋಂಕಿತರಿಗೆ ಮಾರ್ಗದರ್ಶನ, ಸಲಹೆ, ಆತ್ಮವಿಶ್ವಾಸ ವೃದ್ಧಿ ಹಾಗೂ ಚಿಕಿತ್ಸೆಗೆ ಪ್ರೇರಣೆ ಮಾಡುವ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುವರ್ಣ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ಭಾರತಿ, ಸುಲೋಚನಾ, ಜಯಾ, ಚಂದ್ರಕಲಾ, ಹುಸೇನ ಬೇಗಮ್, ತಸ್ಲೀಮ್, ಮಹಬೂಬ್ ಬಿ, ಜಗದೇವಿ ಸೇರಿದಂತೆ ಹಲವು ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಸಂಪರ್ಕ ಕಾರ್ಯಕರ್ತ ಮಹಾದೇವಿ ನಿರೂಪಣೆ ಮಾಡಿದರು. ಭಾಗ್ಯಲಕ್ಷ್ಮಿ ವಂದಿಸಿದರು.