ಡೆಂಗ್ಯೂ ಕುರಿತು ಶಿಕ್ಷಕರಿಗೆ ಜನ ಜಾಗೃತಿ

ಕೆಆರ್ ಪುರ,ಜೂ.೪- ಬಿಬಿಎಂಪಿ ಮಹದೇವಪುರ ವಲಯ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆನಂದಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.


ಆರೋಗ್ಯ ಅಧಿಕಾರಿ ಗುರುರಾಜ್ ಅವರು ಮಾತನಾಡಿ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯವಾದರೆ ನಮ್ಮ ಕಾರ್ಯ ಯಶಸ್ವಿ ಯಾದಂತೆ ಎಂದು ತಿಳಿಸಿದರು. ಮಕ್ಕಳ ಹಾಗೂ ಪೋಷಕರ ಆರೋಗ್ಯದ ನಿಟ್ಟಿನಲ್ಲಿ ಹಲವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು,ಡೆಂಗ್ಯೂ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ತಡೆಗೆ ಅರಿವು ಮೂಡಿಸಲಾಗುವುದು ಎಂದರು.


ಇದೇ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಶಿಕ್ಷಕರಾದ ಎಂಬಿ ಕವಿತಾ ರವರನ್ನು ಶಾಲೆ ಆವರಣದಲ್ಲಿ ಪ್ರತಿ ಶುಕ್ರವಾರ ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಗಳನ್ನಾಗಿ ನೇಮಿಸಿ, ಸದರಿ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಲಾರ್ವ ಮುಕ್ತ ಪ್ರದೇಶ ವನ್ನಾಗಿ ಮಾಡಲು ಆರೋಗ್ಯ ಇಲಾಖೆ ವತಿಯಿಂದ ತಿಳಿಸಲಾಯಿತು.


ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುರಾಜ್, ಶ್ರೀಶೈಲ ಕನ್ನಾಳ್, ಮುಖ್ಯೋಪಾಧ್ಯಾಯರಾದ ನಾಗೇಶ್, ಕಿರಣ್, ಪರಸಪ್ಪ, ಬಂಗಾರಪ್ಪ, ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.