ಗರ್ಭಿಣಿ-ಬಾಣಂತಿಯರಿಗೆ ಪೌಷ್ಠಿಕ ಅಹಾರ ಪೂರೈಸಿ

ಕಲಬುರಗಿ,ನ.29: ಮೂರು ದಿನಗಳ ಕಾಲ ಕಲಬುರಗಿ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅವರು ಗುರುವಾರ ಕಲಬುರಗಿ ನಗರದ ಅಂಗನವಾಡಿ, ಶಾಲೆ, ವಸತಿ ನಿಲಯಕ್ಕೆ ಹಠಾತ್ ಭೇಟಿ ನೀಡಿ ಅಹಾರ ಪೂರೈಕೆಯ ಗುಣಮಟ್ಟದ ಕುರಿತು ಪರಿಶೀಲಿಸಿದರು.

ಕಲಬುರಗಿ ನಗರದ ಗಾಜೀಪುರ ಬಡಾವಣೆಯ ಅಂಗನವಾಡಿಗೆ ಭೇಟಿ ನೀಡಿದ ಅವರು ಇಂದು ಗರ್ಭಿಣಿ ಮಹಿಳೆಯರಿಗೆ ನೀಡಬೇಕಾದ ಮೊಟ್ಟೆ ವಿತರಿಸದೇ ಹಾಗೆ ಇಟ್ಟುಕೊಂಡಿದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಶಿಶು ಅಭಿವೃದ್ಧಿ ಯೋಜನೆ ಮೂಲಕ ಪೌಷ್ಠಿಕ ಆಹಾರ ಒದಗಿಸುತ್ತಿದೆ. ಸ್ಥಳೀಯವಾಗಿ ನೀವು ಸರಿಯಾಗಿ ಕೆಲಸ ಮಾಡದೆ ಹೋದರೆ ಅಪೌಷ್ಠಿಕತೆ ನಿರ್ಮೂಲನೆ ಹೇಗೆ ಸಾಧ್ಯ ಎಂದು ಅಂಗನವಾಡಿ ಕಾರ್ಯಕರ್ತೆಯನ್ನು ಪ್ರಶ್ನಿಸಿದಲ್ಲದೆ ಅಂಗನವಾಡಿ ಕೇಂದ್ರದ ಫಲಾನುಭವಿಯೊಬ್ಬರಿಗೆ ಕರೆ ಮಾಡಿ ಪೌಷ್ಟಿಕ ಆಹಾರ ಸರಿಯಾಗಿ ವಿತರಣೆ ಮಾಡಲಾಗುತ್ತಿದಿಯೇ ಎಂದು ವಿಚಾರಿಸಿದರು. 

ಮಹಾತ್ಮ ಬಸವೇಶ್ವರ ನಗರದ ಸರ್ಕಾರಿ ಕೆ.ಪಿ.ಎಸ್. ಶಾಲೆಗೆ ಮಧ್ಯಾಹ್ನದ ವೇಳೆಯಲ್ಲಿ ಭೇಟಿ ನೀಡಿದ ಅಧ್ಯಕ್ಷರು, ಮಕ್ಕಳಿಗೆ ನೀಡಲಾಗುತ್ತಿದ್ದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು. ಇದಲ್ಲದೆ ಆದರ್ಶ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಸ್ಟಾಕ್ ಗ್ಗಿಂತ ಒಂದೂವರೆ ಕ್ವಿಂಟಾಲ್ ಹೆಚ್ಚು ಅಕ್ಕಿ ಸಂಗ್ರಹಣೆ ಇರುವುದಕ್ಕೆ ಸಿಬ್ಬಂದಿಗೆ ವಿವರಣೆ ಕೇಳಿದರು.

ಜಾಗೃತಿ ಕಾಲೋನಿಯಲ್ಲಿರುವ ಚೆನ್ನಬಸವೇಶ್ವರ ಪ್ರೌಢ ಶಾಲೆಗೆ ಭೇಟಿ ನೀಡಿದ ಡಾ.ಎಚ್.ಕೃಷ್ಣ ಅವರು ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡದಿರುವುದಕ್ಕೆ ಮಕ್ಕಳ ಪಾಲಕರಿಂದ ಆಕ್ಷೇಪಣೆ ಬಂದಿದಿಯೇ ಎಂದು ಶಾಲೆಯ ಮುಖ್ಯಸ್ಥರನ್ನು ಪ್ರಶ್ನಿಸಿದ ಅವರು, ಸರ್ಕಾರಿ ಕಾರ್ಯಕ್ರಮ ಅನುμÁ್ಠನ ಮಾಡಬೇಕಾದ್ದು ಪ್ರತಿ ಶಾಲೆಯ ಕರ್ತವ್ಯವಾಗಿದೆ ಎಂದರು.

ಇದಕ್ಕೂ ಮುನ್ನ ನಗರದ ಲಾಹೋಟಿ ಪೆಟ್ರೋಲ್ ಬಂಕ್‍ಗೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿ  ಡೆನ್ಸಿಟಿ ಮತ್ತು ಫೈರ್ ಎಕ್ಸ್ಟಿಂಗ್ಯೂಶರ್ ಟೆಸ್ಟ್ ಮಾಡಿದರು. ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ಊಟ ಸವಿದರು: ಅನ್ನಪೂರ್ಣ ಕ್ರಾಸ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ನಿಲಯದ ಸಮುಚ್ಚಯಕ್ಕೆ ಭೇಟಿ ನೀಡಿ ವಸತಿ ನಿಲಯದ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದರು. ಮಕ್ಕಳ ಸಮಸ್ಯೆ ಆಲಿಸಿದರುಮ ನಿಲಯದಲ್ಲಿ ಸ್ವಚ್ಛತೆ, ಗುಣಮಟ್ಟದ ಊಟ ಪೂರೈಕೆ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಹೀಗೆ ಮುಂದುವರೆಸಿಕೊಂಡು ಹೋಗುವಂತೆ ನಿಲಯದ ಮೇಲ್ವಿಚಾರಕರಿಗೆ ನಿರ್ದೇಶನ ನೀಡಿದರು.

ಅಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಸಹಾಯಕ ನಿರ್ದೇಶಕ ಮಲ್ಲಿನಾಥ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಡಿ.ಡಿ.ಪಿ.ಐ ಸುರ್ಯಕಾಂತ ಮದಾನೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.