Home ಜಿಲ್ಲೆ ಬೆಂಗಳೂರು ಜಿಲ್ಲೆಯ ನೂತನ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

ಜಿಲ್ಲೆಯ ನೂತನ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

ಕೋಲಾರ,ಜು,೨೦- ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡುವ ಮೂಲಕ ಅಲ್ಲಿ ಓದುವ ಮಕ್ಕಳಿಗೆ ಎಲ್ಲಾ ರೀತಿಯ ಮೂಲಸೌಲಭ್ಯಗಳು ಸಿಗುವಂತೆ ಮಾಡಿ, ಮಕ್ಕಳು ಶಾಲೆಯತ್ತ ಬರಲು ಆಕರ್ಷಣೀಯಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.


ಜಿಲ್ಲಾಡಳತ ಭವನದ ನ್ಯಾಯಂಗ ಸಭಾಂಗಣದಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಸಿಎಸ್‌ಆರ್ ಕೋಶಗಳ ಭಾಗಿಧಾರರ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತನೆ ಮಾಡಿರುವ ಶಾಲೆಗಳಿಗೆ ಅಗತ್ಯವಾದ ಸೌಲಭ್ಯಗಳು ಮತ್ತು ನೆರವನ್ನು ಜಿಲ್ಲೆಯಲ್ಲಿನ ವಿವಿಧ ಕಂಪನಿಗಳ ಸಿಎಸ್‌ಆರ್‌ನಿಧಿಯಿಂದ ಪೂರೈಸುವ ಕೆಲಸವಾಗುತ್ತಿದೆ ಎಂದರು.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ, ಸಮಗ್ರವಾಗಿ ಅಭಿವೃದ್ಧಿ ಪಡಿಸಲು “ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ” ಉಪಕ್ರಮವನ್ನು ಜಾರಿಗೆ ತಂದಿದೆ ಎಂದರು.


ಸಿಎಸ್‌ಆರ್ ನಿಧಿಯ ಬಳಕೆಗೆ ವ್ಯವಸ್ಥಿತ ಚೌಕಟ್ಟು ರೂಪಿಸಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಿಸಿಎಸ್‌ಆರ್ ಕೋಶಗಳನ್ನು ರಚಿಸಲಾಗಿದೆ. ರಾಜ್ಯ ಶಾಲಾ ಶಿಕ್ಷಣ ಸಿಸಿಎಸ್‌ಆರ್ ಕೋಶವನ್ನು ಮುಖ್ಯಮಂತ್ರಿಗಳು ಮುನ್ನೆಡೆಸಿದರೆ, ಜಿಲ್ಲಾ ಮಟ್ಟದ ಕೋಶಗಳಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದರು.


ಸಿಎಸ್‌ಎಸ್‌ಆರ್ ನಿಧಿ ದುರುಪಯೋಗವಾಗುವುದಕ್ಕೆ ಅವಕಾಶ ನೀಡದಿರಿ, ನಿಗಧಿಯಾದ ಮೂಲ ಕಾರ್ಯಕ್ಕೆ ಬಳಕೆಯಾಗಬೇಕು ಎಂದ ಅವರು, ಶಿಕ್ಷಣ ಕ್ಷೇತ್ರ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿ, ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.


ಸರ್ಕಾರಿ ಶಾಲೆಗಳು ದಾಖಲಾತಿ ಇಲ್ಲದೇ ಮುಚ್ಚುವಂತಾದರೆ ಅದು ಸಾಮಾಜಿಕ ನ್ಯಾಯಕ್ಕೆ ಹೊಡೆತ ನೀಡಿದಂತೆ ಎಂದ ಅವರು, ಯಾವುದೇ ಮಗು ಶಾಲೆ,ಶಿಕ್ಷಣದಿಂದ ವಂಚಿತವಾಗಬಾರದು, ಈ ನಿಟ್ಟಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ವೇಗವಾಗಿ ಸಾಗಲಿ ಎಂದು ಸೂಚಿಸಿದರು.


ಕೋಲಾರ ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ, ಈ ಗೌರವಕ್ಕೆ ಧಕ್ಕೆ ಬಾರದ ರೀತಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕು, ಹೊಸದಾಗಿ ಮಾಡಿರುವ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಶೀಘ್ರ ಮಾಡಬೇಕು ಇಲ್ಲವಾದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.


ಈ ಸಭೆಯ ಸಿಎಸ್‌ಎಸ್‌ಆರ್ ನಿಧಿಗೆ ತಾಲ್ಲೂಕಿನ ರಾಜಕಲ್ಲಹಳ್ಳಿ ಕೆಪಿಎಸ್ ಶಾಲೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ನೆರವು, ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಕೆಪಿಎಸ್ ಶಾಲೆಗೆ ಓಎಸ್‌ಎಸ್‌ಎಎಟಿ ಕಂಪನಿಯಿಂದ ನೆರವು, ಮುಳಬಾಗಿಲು ತಾಲ್ಲೂಕಿನ ತಾಯಲೂರು ಕೆಪಿಎಸ್ ಶಾಲೆಗೆ ಹೋಂಡಾ ಕಂಪನಿಯಿಂದ ನೆರವು, ಮುಳಬಾಗಿಲು ನಗರ ಕೆಪಿಎಸ್ ಶಾಲೆಗೆ ಟಾಟಾ ಅಡ್ವಾನ್ಸ್ ಕಂಪನಿ ನೆರವು, ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಪಿಎಸ್ ಶಾಲೆಗೆ ಬಂಡೋ ಪ್ರೈ ಲಿಮಿಟೆಡ್, ಬೇತಮಂಗಲದ ಪಿಎಂ.ಶ್ರೀ ಶಾಲೆಗೆ ಕೆಜಿಎಫ್ ನಗರದ ಬೆಮೆಲ್ ಕಂಪನಿ ನೆರವು ಒದಗಿಸಲು ಸೂಚಿಸಿ, ಮುಂದಿನ ೫ ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ದಿಪಡಿಸಲು ತೀರ್ಮಾನಿಸಲಾಯಿತು.