ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳ ವಿದೇಶ ಶಿಕ್ಷಣಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಿ:ಡಾ. ಜಿ. ಗೋಪಾಲರಾವ್

ಕಲಬುರಗಿ,ಜ.30:ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರು ಎಸ್.ಸಿ-ಎಸ್.ಟಿ ಸಮುದಾಯವು ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ವಿದೇಶಿ ಶಿಕ್ಷಣದ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಜಿ. ಗೋಪಾಲರಾವ್ ಹೇಳಿದರು.

ಗುರುವಾರ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಹಿಯಾ ಕಲಾ ತಂಡ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಹಾಗೂ ಜಾಗೃತಿ ಅರಿವು”ವಿಚಾರಗೋಷ್ಠಿ ಮತ್ತು “ಏಕ ಭಾರತ್ ಶ್ರೇಷ್ಠ ಭಾರತ” ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧುನಿಕತೆಯ ಇಂದಿನ ಜೀವನದಲ್ಲಿ ಅಲ್ಲಲ್ಲಿ ಇನ್ನು ಹಳೆಯ ಶೋಷಣೆಯ ಪದ್ಧತಿಗಳು ಮತ್ತೆ ಮರುಕಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಶಿಕ್ಷಣ, ಅರಿವು-ಜಾಗೃತಿ ಮೂಲಕವೇ ಜಾತಿ ಪದ್ಧತಿ ಹೋಗಲಾಡಿಸಬೇಕಿದ್ದು, ಈ ದಿಕ್ಕಿನಲ್ಲಿ ಸರ್ಕಾರ ಹಡಚ್ಚಿನ ಒತ್ತು ನೀಡಬೇಕಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಸರಳೀಕರಣ ಮಾಡಿದೆ. ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಮಾಹಿತಿ ವಿಳಂಬವಾಗುತ್ತಿರುವುದರಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ. ಇದಕ್ಕಾಗಿ ಸಮುದಾಯದ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದರು.

ನ್ಯಾಯವಾದಿಗಳು ರಾಜು ಮುದ್ದುಡಗಿ ಅವರು ಜಾತಿ ದೌರ್ಜನ್ಯ ಕಾಯ್ದೆ ಮತ್ತು ಜಾತಿ ಪ್ರಮಾಣ ಪತ್ರ ಪ್ರಕರಣಗಳ ನಿರ್ವಹಣೆ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಾ, ತಾಲೂಕಿನ ತಹಶಿಲ್ದಾರರು, ಎಸ್.ಸಿ-ಎಸ್.ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರನ್ನು ಒತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ತಳ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ 5 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ ಎಂದರು.

ಸಮಾಜದ ಹಿರಿಯ ಮುಖಂಡ ಎ. ಬಿ. ಹೊಸಮನಿ ಅವರು ಮಾತನಾಡಿ, ಹಿಂದೆಲ್ಲ ದೌರ್ಜನ್ಯ ಪ್ರಕರಣಗಳಲ್ಲಿ ಸಾವು ಸಂಭವಿಸಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಆಡಳಿತಾತ್ಮಕ ಕೆಲಸಗಳ ವಿಳಂಬ ಧೋರಣೆಯಿಂದ ನೊಂದ ಕುಟುಂಬಗಳು ಕಚೇರಿಗಳಿಗೆ ಅಲೆಯುವಂತಾಗಿದೆ. ಜಿಲ್ಲಾಡಳಿತವು ಕಾಲಮಿತಿಯಲ್ಲಿ ಪರಿಹಾರ ಒದಗಿಸುವತ್ತ ಗಮಹರಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಎಸ್‍ಸಿ/ಎಸ್‍ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1995, 2015 ಮತ್ತು 2016ರ ತಿದ್ದುಪಡಿಗಳ ಬಗ್ಗೆ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸಬೇಕು. ಕಲೆ ಮತ್ತು ಸಾಹಿತ್ಯ ಅಸ್ಪೃಶ್ಯತೆ ವಿರುದ್ಧ ಹೋರಾಡಲು ಅಂಬೇಡ್ಕರ್ ಅವರ ವಿಚಾರಧಾರೆಗಳು ಹೆಚ್ಚಿನ ರೀತಿಯಲ್ಲಿ ಪಸರಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅನಿಲಕುಮಾರ ಜಾಧವ, ಸಿದ್ಧಾರೂಢ ಸಮತಾ ಜೀವನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಚೇತನ್ ಆರ್. ಗುರಿಕಾರ್, ಸತೀಶ್ ಸಂಗನ, ವಿಜಯಲಕ್ಷ್ಮಿ, ಪ್ರಭುಲಿಂಗ, ಬುಡ ಜಂಗಮ್ ಸಮಾಜ ಜಿಲ್ಲಾಧ್ಯಕ್ಷ ಪಂಡಿತ್ ಸರ್ವಾಟಿ, ಅಲೆಮಾರಿ ಸಮಾಜ ಜಿಲ್ಲಾಧ್ಯಕ್ಷ ಅನಿಲ್ ಕಾಂಬಳೆ ಸೇರಿದಂತೆ ಸಮಾಜದ ನೂರಾರು ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಪ್ರಭುಲಿಂಗ ಕಿಣಗಿ ನೇತೃತ್ವದ ಲೋಹಿಯಾ ಕಲಾ ತಂಡ ಬಳಗದಿಂದ “ಏಕಭಾರತ ಶ್ರೇಷ್ಠ ಭಾರತ” ನಾಟಕ ಪ್ರದರ್ಶನ ಕಂಡಿತ್ತು.