Home ಜಿಲ್ಲೆ ರೈತರ ಕೃಷಿ ಕಾರ್ಯಕ್ಕೆ ಅನುಕೂಲವಾಗುವಂತೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ

ರೈತರ ಕೃಷಿ ಕಾರ್ಯಕ್ಕೆ ಅನುಕೂಲವಾಗುವಂತೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ

ಧಾರವಾಡ, ಫೆ.21: ಬೇಸಿಗೆ ಅವಧಿ ಆರಂಭ ಆಗುತ್ತಿರುವದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಸಂಸ್ಥೆಯವರು ಕ್ರಮವಹಿಸಬೇಕು. ಸರಕಾರದ ನಿಯಮದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ, ರೈತರಿಗೆ ಅನುಕೂಲವಾಗುವಂತೆ ಆದಷ್ಟು ಹಗಲು ಹೊತ್ತಿನಲ್ಲಿ ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.


ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.


ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‍ಗಳಿವೆ. ಇದರಲ್ಲಿ 41 ಫೀಡರ್‍ಗಳಿಂದ ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್‍ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್‍ಗಳಿಂದ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.


ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು ಎಂದು ಅವರು ತಿಳಿಸಿದರು.
ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‍ಪೀರ್ ಎಸ್. ಖಾದ್ರಿ, ಮಹಾನಗರ ಪೆÇಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವೇದಿಕೆಯಲ್ಲಿ ಇದ್ದರು.


ಸಭೆಯಲ್ಲಿ ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ ಸಾವಳಗಿ, ಮುಖ್ಯ ಇಂಜನೀಯರ್ ದೀಪಕ ಕಾಮತ, ಅಧೀಕ್ಷಕ ಇಂಜನೀಯರ್ ಕೆ.ವಿ.ಪಾಗಿ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಶಿಲ್ಪಾ, ಕಾರ್ಯಪಾಲಕ ಅಭಿಯಂತರರಾದ ಎಂ.ಟಿ.ದೊಡಮನಿ, ರವೀಂದ್ರ ಗದಗಕರ, ಸಹಾಯಕ ಕಾರ್ಯಪಾಲಕ ಅಭಿಯಂತರ ಗುಲ್ಜಾರ ಅಹ್ಮದ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ವಿ.ಎನ್.ಪಾಟೀಲ ಸೇರಿದಂತೆ ವಿವಿಧ ಇಂಜನೀಯರಗಳು, ಅಧಿಕಾರಿಗಳು ಭಾಗವಹಿಸಿದ್ದರು.


ವಿದ್ಯುತ್ ತಗುಲಿ ಸಾವಿಗಿಡಾಗಿದ್ದ ರೈತನ ಕುಟುಂಬಕ್ಕೆ ಪರಿಹಾರ: ಕಳೆದ 2023 ಜುಲೈ ತಿಂಗಳ ಮಳೆಗಾಲ ಅವಧಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವಿಗಿಡಾಗಿದ್ದ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಮೃತ ರೈತ ಮಾರುತಿ ಕೊನಪ್ಪನವರ ಅವರ ಪತ್ನಿ ಮಲ್ಲವ್ವ ಅವರಿಗೆ ಸಚಿವ ಸಂತೋಷ ಲಾಡ ಅವರು ಹೆಸ್ಕಾಂ ಪರವಾಗಿ ರೂ.5 ಲಕ್ಷದ ಪರಿಹಾರ ಚೆಕ್ ವಿತರಿಸಿದರು.