Home ಜಿಲ್ಲೆ ಥ್ಯಾಂಕ್‌ಲೆಸ್ ಜಾಬ್‌ನಲ್ಲಿ ಸಮಾಜದ ಗೌರವ ಸಿಕ್ಕಿರುವುದು ಹೆಮ್ಮೆ:ಸಿಪಿಐ ಫಸಿವುದ್ದೀನ್

ಥ್ಯಾಂಕ್‌ಲೆಸ್ ಜಾಬ್‌ನಲ್ಲಿ ಸಮಾಜದ ಗೌರವ ಸಿಕ್ಕಿರುವುದು ಹೆಮ್ಮೆ:ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ: ಪೊಲೀಸ್ ಇಲಾಖೆಯ ಕೆಲಸವನ್ನು ಥ್ಯಾಂಕ್‌ಲೆಸ್ ಜಾಬ್ ಎಂದು ಕರೆಯಲಾಗುತ್ತದೆ. ಆದರೆ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸಿ ಬೆಳ್ಳಿ ಮೂರ್ತಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಮಾಜದಿಂದ ದೊರೆತಿರುವ ಸನ್ಮಾನ ಹಾಗೂ ಗೌರವವು ಪೊಲೀಸ್ ಕರ್ತವ್ಯದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಮುದ್ದೇಬಿಹಾಳ ಸಿಪಿಐ ಮೊಹ್ಮದ್ ಫಸಿವುದ್ದೀನ್ ಹೇಳಿದರು.
ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್ ಅಭಿನಂದನಾ ಕಾರ್ಯಕ್ರಮದಲ್ಲಿ ಕಳ್ಳತನ ಪ್ರಕರಣದಲ್ಲಿ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ ಪ್ರಕರಣದ ತನಿಖಾ ತಂಡದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸರಕೋಡದಲ್ಲಿ ಮೂರ್ತಿ ಕಳ್ಳತನವಾದ ಕ್ಷಣದಿಂದಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ದಿನಕ್ಕೆ ಮೂರು ಬಾರಿ ಪ್ರಕರಣದ ಪ್ರಗತಿ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದರು. ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ, ವಿಜಯಪುರ ಜಿಲ್ಲಾ ಎಸ್ಪಿ ಲಕ್ಷ÷್ಮಣ ನಿಂಬರಗಿ ಹಾಗೂ ಡಿವೈಎಸ್ಪಿ ಚಂದ್ರಕಾAತ ನಂದರೆಡ್ಡಿ ಅವರು ತನಿಖಾ ತಂಡಕ್ಕೆ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದರಿಂದ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಫಸಿವುದ್ದೀನ್ ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಾಯ್. ಬಿರಾದಾರ, ಸದಸ್ಯರಾದ ಶ್ರೀಶೈಲ ಮೇಟಿ, ಅಪುö್ಪ ನಾಡಗೌಡ ಸೇರಿದಂತೆ ಹಲವರು ಪ್ರಕರಣದ ತನಿಖೆಗೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
ಸಿಪಿಐ ರಾಮನಗೌಡ ಸಂಕನಾಳ ಮಾತನಾಡಿ, ಇಂತಹ ಸನ್ಮಾನ ಹಾಗೂ ಅಭಿನಂದನೆಗಳು ಪೊಲೀಸರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಮಾಜಕ್ಕೆ ಉತ್ತರದಾಯಿಗಳಾಗಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಇವು ಮೂಡಿಸುತ್ತವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ತಮ್ಮ ಕುಟುಂಬದ ಹಿತವನ್ನೂ ಬದಿಗೊತ್ತಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಬಸರಕೋಡದ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಕಳ್ಳತನವಾದಾಗ ವೈಯಕ್ತಿಕವಾಗಿ ತಮಗೂ ನೋವಾಗಿತ್ತು. ಮೂರ್ತಿಯನ್ನು ಪತ್ತೆಹಚ್ಚಿದಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಬಗ್ಗೆ ಮತ್ತಷ್ಟು ಹೆಮ್ಮೆ ಮೂಡಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವಾಯ್. ಬಿರಾದಾರ, ಸಾಹಿತಿ ಬಿ.ಆರ್. ಪೊಲೀಸಪಾಟೀಲ, ಬಬಲೇಶ್ವರ ಪಿಎಸ್‌ಐ ಸಂಜಯ ತಿಪರೆಡ್ಡಿ, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಸಮಾಜ ಸೇವಕಿ ಮಂಗಳಾದೇವಿ ಬಿರಾದಾರ ಮಾತನಾಡಿದರು.
ವಂದಾಲದ ಪವಾಡ ಬಸವೇಶ್ವರ ಶಾಖಾ ಮಠದ ಸ್ವಾಮೀಜಿ, ಅಪರಾಧ ವಿಭಾಗದ ಪಿಎಸ್‌ಐ ರಂಗಪ್ಪ ಭಂಗಿ, ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ನಾಡಗೌಡ್ರ, ಸದಸ್ಯರಾದ ಸಿಂಧೂಬಲ್ಲಾಳರಾಜ ನಾಡಗೌಡ, ಬಾಲಾಜಿ ಶುಗರ್ಸ್ ನಿರ್ದೇಶಕ ರಾಹುಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ಅಪುö್ಪಗೌಡ ನಾಡಗೌಡ, ಗಣ್ಯರಾದ ಬಿ.ಸಿ. ಮೋಟಗಿ, ಸಂಗನಗೌಡ ಬಿರಾದಾರ, ಎಎಸ್‌ಐ ಎಂ.ಎನ್. ತಳವಾರ, ದೇವಾನಂದ ಲಮಾಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಕಾಶ ಗೋಂಧಳೆ ಹಾಗೂ ಉಮಾ ಹಂಚಿನಾಳ ಕಾರ್ಯಕ್ರಮ ನಿರೂಪಿಸಿದರು.

ಪೊಲೀಸ್ ತಂಡಕ್ಕೆ ತಲೆ ಬಾಗುವೆ: ಭರತಗೌಡ ಪಾಟೀಲ
ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಪವಾಡ ಬಸವೇಶ್ವರರ ಬಗ್ಗೆ ತಮ್ಮ ತಂದೆ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಅಪಾರ ಭಕ್ತಿಯಿದೆ. ಯಾವುದೇ ರಾಜಕೀಯ, ಕೌಟುಂಬಿಕ, ಧಾರ್ಮಿಕ ಅಥವಾ ಔದ್ಯೋಗಿಕ ನಿರ್ಧಾರ ಕೈಗೊಳ್ಳುವ ಮುನ್ನ ಪವಾಡ ಬಸವೇಶ್ವರರನ್ನು ಪೂಜಿಸಿ ಮುಂದುವರಿಯುವ ಪರಂಪರೆ ನಮ್ಮ ಕುಟುಂಬದಲ್ಲಿದೆ ಎಂದರು. ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಇಲಾಖೆಯ ಸಮಸ್ತ ತಂಡಕ್ಕೆ ನಡಹಳ್ಳಿ ಕುಟುಂಬದ ಪರವಾಗಿ ತಲೆಬಾಗಿ ವಂದಿಸುತ್ತೇನೆ ಎಂದು ಭರತಗೌಡ ಪಾಟೀಲ ನಡಹಳ್ಳಿ ಹೇಳಿದರು.