ನೇಪಾಳ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ

ಕಠ್ಮಂಡು, ಸೆ.೯- ನೆರೆಯ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧಿಸಿ ಆನಂತರ ವಾಪಸ್ ಪಡೆದರೂ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ನೇಪಾಳದ ಅಧ್ಯಕ್ಣರ ನಿವಾಸಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.


ದೇಶದಲ್ಲಿ ಪ್ರತಿಭಟನೆ ಹಿಂಸಾಚಾರ ಭುಗಿಲೇಳುತ್ತಿರವ ಹಿನ್ನೆಲೆಯಲ್ಲಿ ಹಲವು ಸಂಸದರ ರಾಜೀನಾಮೆ ಪರ್ವ ಆರಂಭವಾಗಿದೆ. ಈ ನಡುವೆ ಪ್ರಧಾನಿ ಕೆಪಿ ಶರ್ಮಾ ಓಲಿ ದುಬೈಗೆ ಹಾರಲು ಯೋಜಿಸಿದ್ದಾರೆ ಎಂದು ಹೇಳಲಾಗಿದೆ.


ಪ್ರತಿಭಟನಾಕಾರರು ಡಿಸ್ಕಾರ್ಡ್ ಆಪ್ ಮೂಲಕ ಕ್ರಮಗಳನ್ನು ಸಂಘಟಿಸಲು ಸಜ್ಜುಗೊಳಿಸುತ್ತಿದ್ದು ವಿಮಾನದ ಟೈರ್‌ಗಳನ್ನು ನಿಷ್ಕ್ರಿಯಗೊಳಿಸಲು ಅಸಿಟಲೀನ್ ಅನಿಲವನ್ನು ಬಳಸುವುದು ಮತ್ತು ಮದ್ದುಗುಂಡು ದೋಚಲು ಪೊಲೀಸ್ ಠಾಣೆಗುರಿಯಾಗಿ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.


೨೧ ಸಂಸದರ ರಾಜೀನಾಮೆ:


ಈ ನಡುವೆ ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ ೨೧ ಸಂಸದರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇದರಿಂದ ನೇಪಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.


ಅಶಾಂತಿ ಉಲ್ಬಣಗೊಳ್ಳುತ್ತಿದ್ದಂತೆ, ರಾಷ್ಟ್ರೀಯ ಸ್ವತಂತ್ರ ಪಕ್ಷದ ೨೧ ಸಂಸದರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ರವಿ ಲಾಮಿಚಾನೆ ನೇತೃತ್ವದಲ್ಲಿ ಸಂಸತ್ತಿನಲ್ಲಿ ಈ ಸಂಸದರಿಗೆ ದೊರೆತ ಮೊದಲ ಗೆಲುವು ಇದಾಗಿದೆ.


ಸಚಿವರಿಂದಲೂ ರಾಜೀನಾಮೆ:


ನೇಪಾಳ ಜನರಲ್ ಝೆಡ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನೀರು ಸರಬರಾಜು ಸಚಿವರು ರಾಜೀನಾಮೆ ನೀಡಿದ್ದಾರೆ.


ಜನರಲ್ ಝಡ್ ಪ್ರತಿಭಟನೆಯ ಸಂದರ್ಭದಲ್ಲಿ ೧೯ ಜನರು ಪ್ರಾಣ ಕಳೆದುಕೊಂಡ ಘಟನೆಯ ನಂತರ ಸಚಿವ ಯಾದವ್ ಅವರು ಸರ್ಕಾರದಲ್ಲಿ ಸೇವೆ ಸಲ್ಲಿಸಲು ಅರ್ಹರಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ.


“ಗೆಂಜಿ ಯುವ ಪೀಳಿಗೆ ನಿನ್ನೆ ಪ್ರಾರಂಭಿಸಿದ ಆಂದೋಲನವನ್ನು ಬೆಂಬಲಿಸಿ ಮತ್ತು ಸರ್ಕಾರ ಮತ್ತು ಆಡಳಿತದ ದಬ್ಬಾಳಿಕೆಯನ್ನು ವಿರೋಧಿಸಿ ನಾನು ನೀರು ಸರಬರಾಜು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ.


ಪ್ರಿಯ ಯುವ ಸಹೋದರ ಸಹೋದರಿಯರೇ, ನೀವು ನನ್ನ ಮೊದಲ ಮಿತ್ರ ಮತ್ತು ಉತ್ಸಾಹ ಮತ್ತು ಶಕ್ತಿಯ ಮೂಲ. ನಾವೆಲ್ಲರೂ ಸಂಯಮವನ್ನು ಕಾಯ್ದುಕೊಳ್ಳಬೇಕು ಮತ್ತು ಯುವ ಪೀಳಿಗೆಯನ್ನು ಸರಿಯಾದ ದಿಕ್ಕಿನಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ನಿವಾಸದ ಬಳಿ ಗುಂಡಿನ ದಾಳಿ


ಪ್ರಧಾನಿ ಕೆಪಿ ಶರ್ಮಾ ಓಲಿ ಮನೆ ಬಳಿ ಇಬ್ಬರಿಗೆ ಗುಂಡು ತಗುಲಿ ಗಾಯಗೊಂಡಿರುವ ಘಟನೆ ನಡೆದಿದೆ.ನೇಪಾಳದಾದ್ಯಂತ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ಗುಂಡು ಸಿಡಿದಿದ್ದು ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ.


ಪ್ರತಿಭಟನಾಕಾರರು ನಾಯ್ಕಪ್‌ನಲ್ಲಿರುವ ರಮೇಶ್ ಲೇಖಕ್ ಅವರ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ನಿನ್ನೆಯಷ್ಟೇ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಕರ್ಫ್ಯೂ ಮತ್ತು ಭದ್ರತಾ ನಿಯೋಜನೆಗಳ ಹೊರತಾಗಿಯೂ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಪ್ರತಿಭಟನಾಕಾರರು ಇತರ ಉನ್ನತ ನಾಯಕರ ಮನೆಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಮತ್ತು ಬೆಂಕಿ ಹಚ್ಚುತ್ತಿದ್ದಾರೆ ಎಂದು ವರದಿಯಾಗಿದೆ.