
ತಾಳಿಕೋಟಿ: ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದರ ಜೊತೆಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ ೫೦ ಸಾವಿರ ಪರಿಹಾರ ನೀಡಬೇಕೆಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಸರ್ಕಾರಕ್ಕೆ ಆಗ್ರಹಿಸಿದರು.
ಶನಿವಾರರಂದು ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಹಾಗೂ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ೬ ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗಾಗಿ ಮಾಡಿರುವ ಖರ್ಚು, ಬೀಜ-ರಸಗೊಬ್ಬರದ ವೆಚ್ಚ ಸೇರಿದಂತೆ ಕೃಷಿಗಾಗಿ ಮಾಡಿರುವ ಸಾಲವನ್ನು ಮರಳಿ ಪಾವತಿಸುವ ಸ್ಥಿತಿಯಲ್ಲಿ ರೈತರು ಇಲ್ಲ. ಆದ್ದರಿಂದ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದರು.
ಸೋಮವಾರದೊಳಗೆ ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಬರ ಘೋಷಣೆ ಮಾಡುವುದಷ್ಟೇ ಅಲ್ಲಾ ರೈತರ ಮೇಲಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮಳೆಯಿಂದ ಹಾಗೂ ಬರದಿಂದ ಹಾನಿಗೊಳಗಾದ ಬೆಳೆಗಳಿಗೆ ಎಕರೆಗೆ ಕನಿಷ್ಠ ೫೦ ಸಾವಿರ ಪರಿಹಾರ ನೀಡಬೇಕು. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಪರ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ:
ತಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಕ್ರೆಡಿಟ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನಡಹಳ್ಳಿ ಅವರು ರೈತರಿಗೆ ನ್ಯಾಯ ದೊರಕಿಸುವುದೇ ತಮ್ಮ ಏಕೈಕ ಉದ್ದೇಶವಾಗಿದೆ ಎಂದರು.
ಕಾAಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಂದೆ ನಿಂತು ಹೋರಾಟ ನಡೆಸಿದರೂ ನನಗೆ ಯಾವುದೇ ಅಭ್ಯಂತರವಿಲ್ಲ. ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ. ನಾನು ಅವರೊಂದಿಗೆ ಕುಳಿತು ಬೆಂಬಲ ನೀಡುತ್ತೇನೆ. ಬಿಜೆಪಿ, ಕಾಂಗ್ರೆಸ್ ಎಂಬ ರಾಜಕೀಯ ಬೇಧ ಬೇಡ. ಮೊದಲು ರೈತರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು. ಸೋಮವಾರದೊಳಗೆ ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ಕಲ್ಪಿಸದಿದ್ದರೆ ಮಂಗಳವಾರದಿAದ ಇದೇ ಸ್ಥಳದಲ್ಲಿ ಮತ್ತೆ ಧರಣಿ ನಡೆಸಲಾಗುವುದು. ರೈತರಿಗೆ ನ್ಯಾಯ ದೊರೆಯುವವರೆಗೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಅವರು ಎಚ್ಚರಿಸಿದರು.
ಅಲ್ಪಸಂಖ್ಯಾತ ಸಮುದಾಯದಿಂದ ರೈತರಿಗೆ ಬೆಂಬಲ:
ರೈತರ ಹೋರಾಟಕ್ಕೆ ವಿವಿಧ ಸಮುದಾಯಗಳ ಜನರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿರುವುದನ್ನು ನಡಹಳ್ಳಿ ಶ್ಲಾಘಿಸಿದರು.
ಮುದ್ದೇಬಿಹಾಳ ಪಟ್ಟಣದಲ್ಲಿ ಸಣ್ಣ ಗ್ಯಾರೇಜ್, ಪಂಚರ್ ಅಂಗಡಿ ಸೇರಿದಂತೆ ಜೀವನ ನಡೆಸುತ್ತಿರುವ ಬಡ ವ್ಯಾಪಾರಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲಿಸಿರುವುದು ಶ್ಲಾಘನೀಯವಾಗಿದ್ದು ಇಲ್ಲಿ ಹಿಂದೂ-ಮುಸ್ಲಿA ಎಂಬ ಭೇದವಿಲ್ಲ. ರೈತರು ಬೆಳೆದ ಬೆಳೆಯನ್ನೇ ಎಲ್ಲರೂ ತಿನ್ನಬೇಕು. ರೈತರ ಸಂಕಷ್ಟ ಎಲ್ಲರ ಸಂಕಷ್ಟವಾಗಿದೆ ಎಂದರು.
ರೈತರ ಪರವಾಗಿ ಇಷ್ಟೊಂದು ಒಗ್ಗಟ್ಟಿನಿಂದ ಬಂದ್ ನಡೆದಿರುವುದು ಗಮನಾರ್ಹ. ಈ ಬೆಂಬಲ ರೈತರಿಗೆ ಆಶೀರ್ವಾದದ ರೂಪದಲ್ಲಿ ತಲುಪಲಿದೆ. ಜನರ ಒಗ್ಗಟ್ಟು ಹಾಗೂ ಬೆಂಬಲದಿAದ ರೈತರಿಗೆ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸ್ವಯಂಪ್ರೇರಿತವಾಗಿ ಬಂದ ರೈತರು:
ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಹಾಗೂ ಮುಖಂಡರು ಯಾವುದೇ ವಾಹನ ವ್ಯವಸ್ಥೆ ಮಾಡದೆ ಸ್ವಯಂಪ್ರೇರಿತವಾಗಿ ಹೋರಾಟಕ್ಕೆ ಆಗಮಿಸಿರುವುದು ರೈತರ ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ ಎಂದರು.
ಹೋರಾಟಕ್ಕೆ ಸಹಕರಿಸಿದ ಪಕ್ಷದ ಮಂಡಲ ಅಧ್ಯಕ್ಷರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮಹಿಳಾ ಸಂಘಟನೆಯ ಸದಸ್ಯರು, ಕಾರ್ಯಕರ್ತರು ಹಾಗೂ ರೈತರ ಪರವಾಗಿ ವರದಿ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಧನ್ಯವಾದ ಸಲ್ಲಿಸಿದರು.
ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು:
ನಾನು ಇದೇ ತಾಲೂಕಿನ ಮಣ್ಣಿನ ಮಗ. ರೈತರಿಗೆ ಎಂದಿಗೂ ಮೋಸ ಮಾಡುವುದಿಲ್ಲ. ಬರ ಘೋಷಣೆ, ಸಂಪೂರ್ಣ ಸಾಲ ಮನ್ನಾ ಹಾಗೂ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ ೫೦ ಸಾವಿರ ಪರಿಹಾರ ದೊರೆಯಬೇಕು. ಈ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ. ಒಂದು ವಾರವಾಗಲಿ, ೧೫ ದಿನವಾಗಲಿ ಅಥವಾ ಒಂದು ತಿಂಗಳಾಗಲಿ ರೈತರ ಪರವಾಗಿ ಹೋರಾಟ ನಡೆಸುತ್ತೇನೆ ಎಂದು ಎಂ.ಎಸ್. ಪಾಟೀಲ ನಡಹಳ್ಳಿ ಘೋಷಿಸಿದರು.
ಹೋರಾಟದ ಸಂದರ್ಭದಲ್ಲಿ ಭದ್ರತೆ ಹಾಗೂ ಸಹಕಾರ ನೀಡಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಜನಸಾಮಾನ್ಯರು ಹಾಗೂ ರೈತರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.























