
ಆಳಂದ:ಮೇ.26: ರೈತರು, ಕೃಷಿ ಕಾರ್ಮಿಕರು ಹಾಗೂ ಅಂತರ್ಜಲ ವೃದ್ಧಿಗೆ ಸಂಬಂಧಿಸಿದ ವೈಜ್ಞಾನಿಕ ಕಾಮಗಾರಿಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿರುವ ಅಖಿಲ ಭಾರತ ಕಿಸಾನಸಭಾ ಹಾಗೂ ಭಾರತೀಯ ಖೇತ ಮಜದೂರ ಯುನಿಯನ್ ಮುಖಂಡರು ಸೋಮವಾರ ಶಾಸಕ ಬಿ.ಆರ್. ಪಾಟೀಲ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಮುಂದೆ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿಯಿಂದ ತೆರಳಿದ ಮುಖಂಡರು, ಕಾರ್ಯಕರ್ತರು ಘೋಷಣೆಯೊಂದಿಗೆ ಹೊಸ ಚೆಕ್‍ಪೆÇೀಸ್ಟ್ ಸಮೀಪದಲ್ಲಿರುವ ಶಾಸಕ ಕಚೇರಿ ಎದುರು ಕಿಸಾನಸಭಾ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ ಹಾಗೂ ಜಿಲ್ಲಾ ಮುಖಂಡ ಭೀಮಾಶಂಕರ ಮಾಡಿಯಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನೇಕ ರೈತ ಮುಖಂಡರು, ಕಾರ್ಯಕರ್ತರು ಹಾಗೂ ಕೃಷಿ ಕಾರ್ಮಿಕರು ಭಾಗವಹಿಸಿದ್ದರು.
ಉರಿಯುವ ಬಿಸಿಲಿನ ನಡುವೆಯೂ ಪ್ರತಿಭಟನಾಕಾರರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಕಳೆದ ಎರಡು ತಿಂಗಳಿನಿಂದ ರೈತಪರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿμÁ್ಟವಧಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ವಿವಿಧ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಮುಖಂಡರು ಆರೋಪಿಸಿದರು.
ಈ ವೇಳೆ ಮಾತನಾಡಿದ ಮೌಲಾ ಮುಲ್ಲಾ, “ರೈತಪರ ಹೋರಾಟದ ಧ್ವನಿ ಎತ್ತಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಇಂದು ತಮ್ಮದೇ ಕ್ಷೇತ್ರದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮೌನ ವಹಿಸಿರುವುದು ದುರಂತಕರ. ರೈತರು ಕುಡಿಯುವ ನೀರು, ನೀರಾವರಿ, ವಿದ್ಯುತ್ ಮತ್ತು ಬದುಕಿನ ಮೂಲಭೂತ ಸೌಲಭ್ಯಗಳಿಗೆ ಪರದಾಡುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿಲ್ಲ” ಎಂದು ಕಿಡಿಕಾರಿದರು.
ಅಂತರ್ಜಲ ವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸದೇ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಂಡು ಭೂಗರ್ಭ ಜಲಮಟ್ಟ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಮುಖಂಡ ಭೀಮಾಶಂಕರ ಮಾಡಿಯಾಳ ಮಾತನಾಡಿ, ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಹೋರಾಟಗಳು ನಡೆದರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವ ಮನಸ್ಸು ಇಲ್ಲದಿರುವುದು ವಿμÁದನೀಯ ಎಂದು ಹೇಳಿದರು.
“ನಮ್ಮ ಹೊಲ – ನಮ್ಮ ರಸ್ತೆ” ಯೋಜನೆಯನ್ನು ಜಾರಿಗೆ ತರಬೇಕು. ರೈತರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕೃಷಿ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಖಾಸಗಿ ಲೇವಾದೇವಿ ಸಂಸ್ಥೆಗಳ ಅಕ್ರಮ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ದನಗಳ ಕೊಟ್ಟಿಗೆ ಹಾಗೂ ಕುರಿದೊಡ್ಡಿ ನಿರ್ಮಾಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಲೂಟಿ ಮತ್ತು ಅವ್ಯವಹಾರ ನಿಯಂತ್ರಣ ತಪ್ಪಿರುವುದಾಗಿ ಆರೋಪಿಸಿದ ಅವರು, “ಖಂಡಾಳ, ಕೊರಳ್ಳಿ ಸೇರಿದಂತೆ ಹಲವೆಡೆ ಸಾಲದ ಒತ್ತಡದಿಂದ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ರೈತರ ಮೇಲಿನ ಈ ರೀತಿಯ ಸುಲಿಗೆಯನ್ನು ತಡೆಯದೇ ಜನಪ್ರತಿನಿಧಿಗಳು ಮೌನವಾಗಿರುವುದು ನೋವುಂಟು ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ಕಾರ್ಯವೈಖರಿಯ ಮೇಲೂ ತೀವ್ರ ಅಸಮಾಧಾನ ಹೊರಹಾಕಿದರು. ಬೇಡಿಕೆಗಳ ಈಡೇರಿಕೆಯಲ್ಲಿ ವಿಳಂಬ ಮತ್ತು ಮೀನಮೇಷ ಎಣಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ನಂತರ ಪ್ರತಿಭಟನಾಕಾರರು ಶಾಸಕ ಕಚೇರಿಯ ಸಿಬ್ಬಂದಿಗಳಿಗೆ ಮನವಿ ಸಲ್ಲಿಸಿ, ರೈತಪರ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಿಸಾನಸಭಾ ಗೌರವ ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ತಾಲೂಕು ಅಧ್ಯಕ್ಷ ಧರ್ಮಣ್ಣಾ ಪೂಜಾರಿ, ನ್ಯಾಯವಾದಿ ಪಂಡಿತ ಸಲಗರ, ಕಮಲೇಶ ಅವುಟೆ, ರತನಚಂದ ಕಲಶೆಟ್ಟಿ, ಮಹಾದೇವ ಮಂಟಕಿ, ಕಭೀರಾ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


























