
ಕಾಳಗಿ : ಜ.28:ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ನೂರಾರು ರೈತರ ಹೆಸರು ಕೈಬಿಟ್ಟಿರುವುದನ್ನು ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ನೀಡಿ ಮತ್ತು ಬೆಳೆ ವಿಮೆ ಹಣ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ವೀರಣ್ಣ ಗಂಗಾಣಿ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ರೈತರ ಅತಿವೃಷ್ಠಿ ಮಳೆಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರವು ಪರಿಹಾರ ನೀಡುತ್ತಿದೆ. ಆದರೆ ನೂರಾರು ರೈತರ ಹೆಸರು ಕೈಬಿಟ್ಟಿರುವುದನ್ನು ಕಂಡು ಬರುತ್ತಿದೆ. ಇದರಿಂದ ರೈತರು ಪರಿಹಾರವನ್ನು ಪಡೆದುಕೊಳ್ಳದೆ ಕಂಗಲಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಕೈ ಬಿಟ್ಟಿರುವ ರೈತರ ಹೆಸರನ್ನು ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಕೂಡಲೇ ನೀಡಬೇಕು. ಹಾಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಪರಿಹಾರ ಹಣವನ್ನು ಕೂಡಲೇ ಮಂಜೂರು ಮಾಡಿ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಶಿವರಾಜ ಪಾಟೀಲ ಗೋಣಗಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಂದರ ಡಿ ಸಾಗರ, ಭಾರತೀಯ ಕಿಸಾನ ಸಂಘದ ತಾಲೂಕು ಅಧ್ಯಕ್ಷ ಭೀಮರಾಯ ಮಲಘಾಣ, ಮೋಹನ ಚಿನ್ನ, ರೇವಣಸಿದ್ಧ ಕಲಶೆಟ್ಟಿ, ಬಾಬು ಹೀರಾಪುರ, ಶೇಖರ ಪಾಟೀಲ, ನಾಗರಾಜ ಪಾಟೀಲ, ಅಣ್ಣರಾವ ಸಲಗರ, ಅನಿಲಕುಮಾರ ಪಾಟೀಲ, ಬಸವರಾಜ ಪಾಟೀಲ, ರೇವಣಸಿದ್ದಪ್ಪ ಚಿದ್ರಿ, ಸಂತೋಷ ಪಾಟೀಲ, ಮೌನೇಶ ಬಡಿಗೇರ, ಬಸವರಾಜ ರಾಕ, ರಾಚಣ್ಣ ರಾಕ, ಪ್ರಭಾಕರ ಇಟಗಿ ಸೇರಿದಂತೆ ಅನೇಕರಿದ್ದರು.
ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರ ಬೆಳೆದ ತೊಗರಿ ಬೆಳೆಯ ಬೆಂಬಲ ಬೆಲೆ ರೂ 12500 ಹೆಚ್ಚಿಸಬೇಕು
ಸುಂದರ ಡಿ ಸಾಗರ
ಕಲಬುರಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ
ಕಾಳಗಿ ತಹಸೀಲ್ ಕಾರ್ಯಾಲದಲ್ಲಿ ಗ್ರೇಡ್ -2 ಅಧಿಕಾರಿಗಳು ಜಾತಿ ಮತ್ತು ಆದಾಯ ಪ್ರಮಾಣವನ್ನು, ವಂಶಾವಳಿ, ಗೇಣಿ, ಬೇಬಾಕ, ಬೆಳೆ ದೃಡೀಕರಣ ಇತರೆ ಆನ್ಲೈನ್ ಸಲ್ಲಿಸಿದ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಿ, ರೈತರಿಗೆ ಪದೇ ಪದೇ ಓಡಾಡುವಂತೆ ಮಾಡುತ್ತಿದ್ದು. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು.
ಮೋಹನ ಚಿನ್ನ ಕೊಡದೂರ
ಸಾಮಾಜಿಕ ಹೋರಾಟಗಾರ

























