
ಕೊರಟಗೆರೆ, ಫೆ. ೩- ತಾಲ್ಲೂಕಿನ ಹರಿಹರಪ್ಪನಪಾಳ್ಯ, ಕಾಮರಾಜನಹಳ್ಳಿ, ಹುಲುಗೋನಹಳ್ಳಿ, ಗುಂಡಿನಪಾಳ್ಯ, ಹುಲಿಕುಂಟೆ, ಗೌರಗನಹಳ್ಳಿ, ಬೋಡಬಂಡೆನಹಳ್ಳಿ, ಮಲ್ಲೇಶ್ವರಂ, ಹಂಚಿಹಳ್ಳಿ, ದಿಣ್ಣೆಪಾಳ್ಯ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಅಡಿ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಸಿ.ಯತಿರಾಜ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂಬ ಭ್ರಮೆ ಹುಟ್ಟಿಸಿ ರೈತರು, ಕಾರ್ಮಿಕರ ಮಕ್ಕಳು, ಬಡವರು ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಬೇಕು. ಸರ್ಕಾರದ ಈ ನೀತಿಯನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೂ ಹೋರಾಟ ಕಟ್ಟಬೇಕು ಎಂದರು.
ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಮಾತನಾಡಿ, ಅಕ್ಟೋಬರ್ ೧೫ ಹಾಗೂ ಡಿಸೆಂಬರ್ ೩೦ ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ ೬೦೦೦ ಶಾಲೆಗಳು ಉಳಿದು ೪೦,೦೦೦ ಸರ್ಕಾರಿ ಶಾಲೆಗಳು ನಶಿಸುವವು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ೫ ಕಿ.ಮೀ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ ಎಂದು ಹೇಳಿದರು.
ಈಗಾಗಲೇ ೧೫ ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ ೧೭ ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ರಾಜ್ಯದ ಲಕ್ಷಾಂತರ ರೈತ, ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈಗಾಗಲೇ ಇಳಿಮುಖ ಪಡೆದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತನ್ನ ದೇಹದಲ್ಲಿ ಕನ್ನಡ ರಕ್ತ ಹರಿಯುವುದು ಎಂದು ಹೇಳುತ್ತಾರೆ. ಆದರೆ ಹಿಂದಿನ ಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ೧೯೯೦ ರಲ್ಲಿ ಕಾಂಗ್ರೆಸ್ ಸರ್ಕಾರ ತಂದ ಎಲ್.ಪಿ.ಜಿ ನೀತಿಯಿಂದಾಗಿ ಶಿಕ್ಷಣದ ಖಾಸಗೀಕರಣ ಆರಂಭಗೊಂಡಿತು. ಶಿಕ್ಷಣವನ್ನು ಖಾಸಗೀಕರಣದ ಪರಿಧಿಯಿಂದ ಹೊರಗಿಡಬೇಕು. ಈ ನೀತಿಗಳನ್ನು ವಿರೋಧಿಸಿ ಬಲಿಷ್ಠ ಹೋರಾಟ ಬೆಳೆಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿಯ ಮಂಜುಳ ಮಾತನಾಡಿ, ಸರ್ಕಾರಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಸಾರ್ವಜನಿಕ ಕೇತ್ರಗಳನ್ನು ಖಾಸಗೀಕರಣ ಮಾಡಿ ಶಿಕ್ಷಣ, ಆರೋಗ್ಯ ಕೇವಲ ಶ್ರೀಮಂತ ವರ್ಗದವರ ಸ್ವತ್ತಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷೆ ಟಿ. ಅಶ್ವಿನಿ, ಸಾರ್ವಜನಿಕ ಶಿಕ್ಷಣ ಸಮಿತಿ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.




























