Home ಜಿಲ್ಲೆ ಬೆಂಗಳೂರು ದಿನೇಶ್ ಗುಂಡೂರಾವ್‌ರಿಗೆ ಡಿಸಿಎಂ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ

ದಿನೇಶ್ ಗುಂಡೂರಾವ್‌ರಿಗೆ ಡಿಸಿಎಂ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು,ಜೂ೨: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಜಂಟಿ ಮನವಿ ಪತ್ರ ಸಲ್ಲಿಸಿದರು.


ಗಾಂಧಿನಗರ ಕ್ಷೇತ್ರದ ಪ್ರಮುಖ ನಾಯಕರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ದಿನೇಶ್ ಗುಂಡೂರಾವ್ ಪರವಾಗಿ ಘೋಷಣೆಗಳನ್ನು ಕೂಗಿದರು. ಪಕ್ಷಕ್ಕಾಗಿ ದಶಕಗಳಿಂದ ಶ್ರಮಿಸಿರುವ ಅವರಿಗೆ ತಕ್ಷಣವೇ ಡಿಸಿಎಂ ಹುದ್ದೆ ನೀಡುವ ಮೂಲಕ ಹೈಕಮಾಂಡ್ ಸೂಕ್ತ ನಾಯಕತ್ವ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


“ರಾಜ್ಯದ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ದಿನೇಶ್ ಗುಂಡೂರಾವ್ ಅವರಂತಹ ಅನುಭವಿ ನಾಯಕರ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆಯಾಗಬೇಕಿದೆ. ಆದ್ದರಿಂದ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ಉನ್ನತ ನಾಯಕತ್ವವು ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು,” ಎಂದು ಮುಖಂಡರು ಹಕ್ಕೊತ್ತಾಯ ಮಾಡಿದರು.


ಪ್ರತಿಭಟನೆಯಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಟಿ. ಮಲ್ಲೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸರವಣ, ಶ್ರೀನಿವಾಸ್ ಮೂರ್ತಿ, ಗಾಂಧಿನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮೇಶ್ ಬಾಬು, ರಘುನಾಥ್, ರಾಜ್ ಕಾರ್ತಿಕ್, ನವೀನ್ ಕುಮಾರ್ ರಾಥೋಡ್, ರಾಮಚಂದ್ರಪ್ಪ, ಶಶಿಕುಮಾರ್, ಶಿವಕುಮಾರ್, ವಿ. ಸತ್ಯರಾಜ್, ಲಕ್ಷ್ಮಿಕಾಂತ್ ಸೇರಿದಂತೆ ಗಾಂಧಿನಗರ ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.