Home ಜಿಲ್ಲೆ ಕಲಬುರಗಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಬಾಕಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಬಾಕಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ :ತಾಲೂಕ ಪಂಚಾಯತ್ ಕಾರ್ಯಾಲಯದ ಎದುರುಗಡೆ, ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಚಿಂಚೋಳಿ ತಾಲ್ಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು, ರೈತರು ಸಂಪೂರ್ಣವಾಗಿ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ ಎಂದರು. ಬಿತ್ತನೆಗೆ ಬಳಸಿದ ಬೀಜ, ರಸಗೊಬ್ಬರ ಹಾಗೂ ಇತರೆ ವೆಚ್ಚಗಳಿಂದ ಸಾಲದ ಬಾಧೆ ಹೆಚ್ಚಾಗಿ, ಮಧ್ಯಮ ಹಾಗೂ ಬಡ ರೈತರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಎರಡು ತಿಂಗಳಾದರೂ ಕೂಲಿಹಣ ಪಾವತಿಯಾಗದೇ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನವಿಡೀ ದುಡಿದು ಅದೇ ಕೂಲಿಯಿಂದ ಕುಟುಂಬ ನಡೆಸುವ ಕಾರ್ಮಿಕರ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.
ಚಿಂಚೋಳಿ ತಾಲೂಕಿನ ಕನಕಪೂರ, ಚಂದನಕೇರಾ, ನರನಾಳ, ಐನೋಳಿ, ಯಂಪಳ್ಳಿ, ಶಿಕಾರಮೋತಕಪಳ್ಳಿ, ತುಮಕುಂಟಾ, ದೇಗಲಮಡಿ, ಗಾರಂಪಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ೫-೬ ವಾರಗಳಾದರೂ ಕೂಲಿಹಣ ಪಾವತಿಯಾಗದೇ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ) ಅನುಷ್ಠಾನದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ಕೆಲಸ ಮಾಡದೇ ಫೋಟೋ ತೆಗೆಸಿ ಹಣ ಪಡೆಯುವ ಘಟನೆಗಳು ಕೆಲ ಪಂಚಾಯತಿಗಳಲ್ಲಿ ನಡೆಯುತ್ತಿವೆ ಎಂದು ಹೇಳಿದರು. ಇದರಿಂದ ನಿಜವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಬಾಕಿ ವೇತನ ಪಾವತಿಸಬೇಕು, ಅಕ್ರಮಗಳಿಗೆ ತಡೆಹಿಡಿಯಬೇಕು ಹಾಗೂ ಸಂಬAಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಜಗದೇವಿ ಚಂದನಕೇರಾ, ಮಲ್ಲಮ್ಮ ಕೊಡ್ಲಿ, ಹನುಮಂತರಾವ ದೇಶಪಾಂಡೆ, ಮಾರುತಿ ಐನೋಳಿ, ಬಂಡಯ್ಯ ಸ್ವಾಮಿ, ಖಾಜಮಿಯಾ ಇನಮದಾರ, ಮಾರುತಿ ಗಂಜಿಗಿರಿ ಸೇರಿದಂತೆ ಅನೇಕ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.