ಪರಿಹಾರ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಬಾಗಲಕೋಟ, ಆ22: ಬೆಳೆ ನಷ್ಟ ಪರಿಹಾರ ಒದಗಿಸುವದು,, ಬೆಳೆ ವಿಮಾ ಅವದಿ ಮುಂದುವರೆಸುವದು, ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸಬೇಕು, ಯೂರಿಯಾ ರಸಗೊಬ್ಬರ ಪೂರೈಕೆ, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಪುನರ್ ನಿರ್ಮಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ಬೀಳಗಿ ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ತಹಶೀಲ್ದಾರ ವಿನೋದ ಹತ್ತಳ್ಳಿ ಮೂಲಕ ಮನವಿ ಸಲ್ಲಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯಾದ್ಯಂತ ತೇವಾಂಶ ಹೆಚ್ಚಾಗಿ ಬೆಳೆಗಳಾದ ಈರುಳ್ಳಿ, ಗೋವಿನಜೋಳ, ಸಜ್ಜೆ, ತೊಗರಿ, ಹೆಸರು,ಹತ್ತಿ, ಜೋಳ,ಮೆಣಸಿನಕಾಯಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ,ರೇಷ್ಮೆ ಇಲಾಖೆಯ ವಿವಿಧ ಬೆಳೆಗಳು ನೀರುಪಾಲಾಗಿದೆ. ರೈತರು ಈ ಬೆಳೆಗಳನ್ನು ಬೆಳೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದು , ರೈತರಿಗೆ ಸರಕಾರ ಯಾವುದೇ ತಾಂತ್ರಿಕ ತೊಂದರೆ ನೆಪ ಹೇಳದೆ, ಬೆಳೆ ಹಾನಿಯಾದ ಜಮೀನಗಳ ಸಮೀಕ್ಷೆ ನಡೆಸಿ ನ್ಯಾಯೋಚಿತ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಕೋಶ್ಯಾಧ್ಯಕ್ಷ ಮುದಕಪ್ಪ ವಡವಾಣಿ ಮಾತನಾಡಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಪರಿಹಾರಕ್ಕಾಗಿ ಜಾರಿಗೆ ತಂದಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ರೈತರಿಗೆ ಅತ್ಯಂತ ಲಾಭದಾಯಕವಾಗಿದ್ದು. ಆದರೆ, ಹೋಬಳಿವಾರು ಕೆಲವು ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಪಾವತಿಗೆ ಅವಕಾಶ ನೀಡಿದ್ದು ಎಲ್ಲ ಬೆಳೆಗಳಿಗೆ ವಿಮೆ ಪಾವತಿಸಲು ಅವಕಾಶ ನೀಡಬೇಕು, ಕಳೆದ ಕೆಲವು ವರ್ಷಗಳಿಂದ ವಿಮಾ ಕಂಪನಿಗಳು ರೈತರ ಬೆಳೆ ನಷ್ಟವಾದರೂ ಕ್ಲೇಮ ಪಾವತಿಸದೇ ಅನ್ಯಾಯ ಮಾಡುತ್ತಿದ್ದು, ತಕ್ಷಣ ಸರಕಾರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಬೆಳೆ ವಿಮೆ ಪಾವತಿಸುವ ಅವಧಿಯನ್ನು ಮುಂದುವರೆಸಬೇಕು, ರೈತರಿಗೆ ಬೆಳೆ ವಿಮೆ ಬಗ್ಗೆ ಸರಕಾರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ,ನಗರ ಅಧ್ಯಕ್ಷ ಸಿದ್ದು ಗಾಣಿಗೇರ, ರೈತ ಸಂಘದ ತಾಲೂಕು ಕಾರ್ಯದಶಿ9 ಶಿವನಗೌಡ ಪಾಟೀಲ, ರೈತ ದುರೀಣರಾದ ಅಶೋಕ ಮಂತ್ರಿ, ನಿಂಗಪ್ಪ ಹೂಗಾರ, ಸುರೇಶ ಹೂಗಾರ, ಮಹಾಂತೇಶ ಡಂಗಿ, ಹಣಮಂತ ದೊರೆಗೊಳ, ಶಾಂತಯ್ಯ ಪಂಚಗಟ್ಟಿಮಠ, ಸಿದ್ದಪ್ಪ ಕೂಗಟಿ, ಶ್ರೀಶೈಲ ಕುಂದರಗಿಮಠ, ಶೇಖಪ್ಪ ಗಾಣಿಗೇರ ಇದ್ದರು.