Home ಜಿಲ್ಲೆ ಬೆಂಗಳೂರು ಪಿಡಿಒ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ

ಪಿಡಿಒ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ

ಕೋಲಾರ, ೫-: ಅತಿಯಾದ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆಯಲ್ಲಿನ ವಿಳಂಬ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಲ ಗ್ರಾಮ ಪಂಚಾಯತಿಯ ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಆತ್ಮಹತ್ಯೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಜಿಪಂ ಮುಂದೆ ಪ್ರತಿಭಟನೆ ನಡೆಸಿದರು


ಪ್ರತಿಭಟನೆಯನ್ನು ಉದ್ದೇಶಿಸಿ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಹೇಶ್ ಕುಮಾರ್ ಮಾತನಾಡಿ ರಾಜ್ಯದ ಗದಗ ಜಿಲ್ಲೆಯ ಮುಕ್ತಂಹುಸೇನ ಕರಡಿಗುಡ್ಡ ಅವರು ಅಸೂಟಿ ಹಾಗೂ ಕೊತಬಾಲ ಎರಡು ಪಂಚಾಯತಿಗಳ ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ದಾಖಲಾಗಿದ್ದ ಲೋಕಾಯುಕ್ತ ಪ್ರಕರಣದ ಕಾರಣಕ್ಕೆ ಅಮಾನತುಗೊಂಡು, ಕಳೆದ ೮-೯ ತಿಂಗಳುಗಳಿಂದ ಅವರಿಗೆ ಯಾವುದೇ ವೇತನ ಪಾವತಿಯಾಗಿರಲಿಲ್ಲ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆರ್ಥಿಕ ಮುಗ್ಗಟ್ಟು ಎಷ್ಟರ ಮಟ್ಟಿಗಿತ್ತೆಂದರೆ, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುವಂತಹ ಸ್ಥಿತಿ ಎದುರಾಗಿತ್ತು. ಇಂತಹ ಭೀಕರ ಪರಿಸ್ಥಿತಿಯು ಇಡೀ ರಾಜ್ಯದ ಪಿಡಿಒಗಳು ಎದುರಿಸುತ್ತಿರುವ ನೈಜ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು


ಘಟನೆ ಸಂಬಂಧವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಒತ್ತಾಯಿಸಿ ಮುಕ್ತಂಹುಸೇನ ಅವರ ಸಾವಿಗೆ ನ್ಯಾಯ ಒದಗಿಸಲು ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು, ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಬಾಕಿ ಇರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು


ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕಚೇರಿಗಳಲ್ಲಿ ೧೦-೧೫ ವರ್ಷಗಳಿಂದ ಬೇರೂರಿರುವ ಸಿಬ್ಬಂದಿಗಳಿಂದ ಕೆಳಹಂತದ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದ್ದು, ಅಂತಹವರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಒಬ್ಬರೇ ಅಧಿಕಾರಿಗೆ ಎರಡೆರಡು ಪಂಚಾಯತಿಗಳ ಜವಾಬ್ದಾರಿ ನೀಡುವುದನ್ನು ತಪ್ಪಿಸಿ ಒತ್ತಡ ರಹಿತ ವಾತಾವರಣ ನಿರ್ಮಿಸಬೇಕು ಹಾಗೂ ಕ್ಷುಲ್ಲಕ ಕಾರಣಗಳಿಗೆ ಅಮಾನತು ಮಾಡುವ ಪದ್ಧತಿಯನ್ನು ಕೈಬಿಡಬೇಕು. ನೌಕರರ ಸಾವುಗಳ ಕುರಿತು ಅಧ್ಯಯನ ಮಾಡಲು ರಚಿಸಲಾಗಿದ್ದ ಮೀನಾಕ್ಷಿ ಸುಂದರಂ ಸಮಿತಿಯ ವರದಿಯನ್ನು ತಕ್ಷಣವೇ ಪಡೆದು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು


ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷೆ ಎನ್. ದೀಪ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಕಾಶೀನಾಥ್, ಕಾರ್ಯಾಧ್ಯಕ್ಷ ರಾಮಕೃಷ್ಣ, ಪದಾಧಿಕಾರಿಗಳಾದ ಮೋಹನ್ ಕುಮಾರ್, ರಮೇಶ್, ಎಜಾಜ್ ಪಾಷಾ,, ಶ್ರೀನಿವಾಸ್ ಮೂರ್ತಿ, ಜಗದೀಶ್, ಅಂಬರೀಶ್, ಅಶ್ವತ್ ನಾರಾಯಣ, ಶಂಕರ್, ಮಂಜುನಾಥ್,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.