ರೈತರಿಂದ ಪ್ರತಿಭಟನೆ

ನವಲಗುಂದ,ಜ29 : ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿರುವ ಗೋವಿನ ಜೋಳಕ್ಕೆ 2400 ಬೆಂಬಲ ಬೆಲೆ ಘೋಷಣೆಯಂತೆ ದರ ನೀಡಬೇಕು ರಿಯಾಯತಿ ಹೆಸರಿನಲ್ಲಿ ರೈತರಿಗೆ ಅನಾನುಕೂಲವಾಗಬಾರದು, ಕಳಸಾ, ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ತ್ವರಿತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ಪಕ್ಷಾತೀತ ರೈತ ಹೋರಾಟಗಾರರು ಸ್ಥಳೀಯ ನೀಲಮ್ಮನ ಜಲಾಶಯ ಬಳಿ ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್ ಮಾತನಾಡಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರದ ಸೂಚನೆ ಮೆರೆಗೆ ರಾಜ್ಯ ಸರಕಾರ ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರ ಆರಂಭಿಸಲು ಅನುಮತಿ ನೀಡಿದ್ದು ಸ್ವಾಗತಾರ್ಹ. ಆದರೆ ಹಿಂಗಾರಿನಲ್ಲಿ ಅತೀವೃಷ್ಟಿಗೆ ಬೆಳೆಗಳು ಹಾನಿಗೊಳಗಾಗಿದ್ದರಿಂದ ಕಡಿಮೆ ಇಳುವರಿ ಬಂದಿದ್ದು ರೈತರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ 5860ರೂಗಳ ಜತೆಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ಒಂದು ಸಾವಿರ ರೂಗಳನ್ನು ನೀಡಿ ಕಡಲೆ ಖರೀದಿಸಬೇಕು ಹಾಗೂ ಖರೀದಿ ಮಿತಿಯನ್ನು 15ಕ್ವಿಂಟಲ್‍ನಿಂದ 30 ಕ್ವೀಂಟಲ್‍ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್‍ಗಳಲ್ಲಿ ನೀಡುವ ಸಾಲದ ಮಿತಿಯನ್ನು 3ರಿಂದ 5ಲಕ್ಷಕ್ಕೆ ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿ ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸುಧೀರ ಸಾಹುಕಾರ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ, ರವಿ ತೋಟದ, ಶಿವಣ್ಣ ಹುಬ್ಬಳ್ಳಿ, ಭಗವಂತಪ್ಪ ಪುಟ್ಟಣ್ಣವರ, ಗಂಗಪ್ಪ ಸಂಗಟಿ, ಕರಿಯಪ್ಪ ತಳವಾರ,ಸಿದ್ದಲಿಂಗಪ್ಪ ಹಳ್ಳದ, ಹುಸೇನಸಾಬ ನದಾಫ್, ಮುರುಗೆಪ್ಪ ಪಲ್ಲೇದ,ಧೃವ ಹೊಸಮನಿ,ಈರಣ್ಣ ಬಸಾಪೂರ,ಗೋಪಾಲಗೌಡ ಖಾನಗೌಡ್ರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.