
ಸಂಜೆವಾಣಿ ವಾರ್ತ
ಹುಮನಾಬಾದ್ :ಫೆ.೨೪: ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹುಮನಾಬಾದ್ ಬಂದ್‌ಗೆ ಕರೆ ನೀಡಲಾಗಿದ್ದು, ಬಹುತೇಕ ಎಲ್ಲಾ ಅಂಗಡಿ-ಮುAಗಟ್ಟುಗಳು ಮುಚ್ಚಲ್ಪಟ್ಟವು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಒಳಮೀಸಲಾತಿ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂದು ಘೋಷಣೆಗಳನ್ನು ಕೂಗಲಾಯಿತು. ಬಳಿಕ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗಮನವಿ ಪತ್ರ ಸಲ್ಲಿಸಲಾಯಿತು.
ಒಳಮೀಸಲಾತಿಯ ರೋಸ್ಟರ್ ಸಿದ್ಧಪಡಿಸುವಾಗ ಸಮತೋಲನ ಕಾಪಾಡದಿದ್ದರೆ ಪರಿಶಿಷ್ಟ ಜಾತಿಗಳ ನೇಮಕಾತಿಯಲ್ಲಿ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಸಮುದಾಯಗಳು ಸಂಪೂರ್ಣವಾಗಿ ಅವಕಾಶದಿಂದ ವಂಚಿತರಾಗುವ ಅಪಾಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ವರ್ಗಗಳಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಅರ್ಹ ಅಭ್ಯರ್ಥಿಗಳು ಇದ್ದರೂ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ಅದನ್ನು ಸಾಮಾಜಿಕ ನ್ಯಾಯವೆಂದು ಹೇಳಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಮೀಸಲಾತಿಯ ಉದ್ದೇಶವು ಸಮಾನ ಅವಕಾಶ ಕಲ್ಪಿಸುವುದಾಗಿದ್ದು, ಪ್ರವರ್ಗ-ಬಿಮತ್ತು ಪ್ರವರ್ಗ-ಸಿ ಸಮುದಾಯಗಳಿಗೆ ಅನ್ಯಾಯವಾಗುವ ಒಳಮೀಸಲಾತಿ ಕಾಯ್ದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರವರ್ಗ-ಎ, ಬಿ, ಸಿ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ಹೊಸ ಕಾಯ್ದೆ ರೂಪಿಸಬೇಕು. ಒಳಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಬೇಕು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಇರುವ ಗೊಂದಲ ಪರಿಹಾರವಾಗುವ ತನಕ ಪ್ರಸ್ತುತ ಒಳಮೀಸಲಾತಿ ಕಾರ್ಯಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಹೊಸ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ತುರ್ತಾಗಿ ನಿಲ್ಲಿಸಿ, ಹಳೆಯ ಪ್ರಮಾಣ ಪತ್ರಗಳನ್ನು ಮುಂದುವರಿಸಬೇಕು. ಸಮಸ್ಯೆ ಪರಿಹಾರವಾಗುವ ತನಕ ಹಳೆಯ ಮೀಸಲಾತಿ ಆಧಾರದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಓತಾಯಿಸಿದರು.
ಸಮಿತಿ ಅಧ್ಯಕ್ಷ ಬಾಬು ಟೈಗರ್, ಅಂಕುಶ್ ಗೋಖಲೆ, ಬಸವರಾಜ ಆರ್ಯ, ಗಜೇಂದ್ರ ಕನಕಟಕರ, ಲಕ್ಷ್ಮೀಪುತ್ರ ಮಾಳಗೆ, ದೇವೇಂದ್ರ ಫೋಲಾ, ವೀರಪ್ಪ ಭೋತಾಳೆ, ಸುರೇಶ್ ಫಾಂಗ್ರೆ, ಗೌತಮ ಚೌಹಾಣ, ಈಶ್ವರ ಕ್ರಾಂತಿ, ರಾಹುಲ್ ಉದ್ಘಾ, ಅನೀಲ ದೊಡ್ಡಿ, ಶಿವಾನಂದ ಕಟ್ಟಿಮನಿ, ಲೋಕೇಶ ಮೇತ್ರೆ, ಹುಲೆಪ್ಪ, ರವಿ ಹೊಸಳ್ಳಿ, ದಿಲೀಪ ಮರಪಳ್ಳಿಕರ, ವೈಜಿನಾಥ ಸಿಂಧೆ, ಶರಣಪ್ಪಾ ಮೇತ್ರೆ, ಸಿದ್ದಾರ್ಥ್ ಕಾಂಬಳೆ, ಸುನೀಲ, ಶಿವರಾಜ, ಶ್ರೀಧರ, ವಿನೋದ, ಮಲ್ಲಿಕಾರ್ಜುನ ಶರ್ಮಾ, ಸೇರಿದಂತೆ ಅನೇಕರು ಇದ್ದರು.



























