
ಕಲಬುರಗಿ:ನ.5- ಜಿಲ್ಲೆಯ ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ವಿರುದ್ಧವಾಗಿ ಅಮಾಯಕ ಗ್ರಾಹಕರಿಂದ ಲಕ್ಷಾಂತರ ರೂ. ವಿದ್ಯುತ್ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ತನಿಖೆ ಕೈಗೊಂಡು ತಪ್ಪು ಸರಿಪಡಿಸಿಕೊಳ್ಳದಿದ್ದರೆ ಇದೇ ನ.10ರಂದು ಜೇವರ್ಗಿಯ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶ್‍ಕುಮಾರ್ ರಾಠೋಡ್ ಎಚ್ಚರಿಕೆ ನೀಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ, ಆದರ್ಶ ಗ್ರಾಮ ಸಮಿತಿ, ಯಾಳವಾರ ಹಾಗೂ ಜೇವರ್ಗಿ-ಯಡ್ರಾಮಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅಡಿ ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಜೇವರ್ಗಿ ತಾಲೂಕಿನ ಚಿಗರತಳ್ಳಿ, ಯಾಳವಾರ, ಕೊಡಚಿ, ಲಕಣಾಪುರ, ಖಾದ್ಯಾಪುರ, ಚಿಗರಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳ ಹಿಂದಿನವರೆಗೆ ಶೂನ್ಯ ಬಿಲ್ ಬರುತ್ತಿತ್ತಾದರೂ, ಎರಡು ತಿಂಗಳಿಂದ ಪ್ರತಿ ಮನೆಗೆ ಸಾವಿರಗಟ್ಟಲೆ ಬಿಲ್ ಬರುತ್ತಿದೆ. ಕೆಲವು ಮನೆಗಳಿಗೆ ಲಕ್ಷಾಂತರ ರೂಪಾಯಿಗಳ ಬಿಲ್ ನೀಡಲಾಗಿದೆ. ಇದೇವೇಳೆ, ಗ್ರಾಹಕರ ಮನೆಗೆ ಭೇಟಿ ನೀಡುವ ಜೆಸ್ಕಾಂ ನೌಕರರು ಬಿಲ್ ಪಾವತಿಸದೆ ಹೋದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಅಮಾಯಕ ಗ್ರಾಹಕರು ಸಾಲ ಮಾಡಿ ಸಾವಿರಗಟ್ಟಲೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಜನರಿಗೆ ಉಚಿತ ವಿದ್ಯುತ್ ಪೂರೈಸುವುದಾಗಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿದ್ದು, ಅದರನ್ವಯ ರಾಜ್ಯದಾದ್ಯಂತ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದೆ. ಆದರೆ, ಜೇವರ್ಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಕಳೆದ ಎರಡು ತಿಂಗಳಿಂದ ಸಾವಿರಗಟ್ಟಲೆ ಹಾಗೂ ಕೆಲವೆಡೆ ಲಕ್ಷಗಟ್ಟಲೆ ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಈ ಕುರಿತು ಕೂಡಲೆ ಜೆಸ್ಕಾಂ ಹಿರಿಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಮಾಯಕ ಗ್ರಾಹಕರಿಗೆ ನ್ಯಾಯ ಒದಗಿಸದೆ ಹೋದರೆ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದರು.
ಒಂದುವೇಳೆ, ಜೆಸ್ಕಾಂ ಮನೆಗಳಿಗೆ ಅಳವಡಿಸಿರುವ ಮೀಟರ್‍ಗಳಲ್ಲಿ ದೋಷ ಇರುವುದೇ ನಿಜವಾಗಿದ್ದಲ್ಲಿ ಕೂಡಲೆ ದೋಷಪೂರ್ವ ಮೀಟರ್‍ಗಳನ್ನು ದುರಸ್ತಿಗೊಳಿಸಬೇಕು. ಮೇಲಾಗಿ, ವಿದ್ಯುತ್ ಬಿಲ್ ಹೆಸರಿನಲ್ಲಿ ಗ್ರಾಹಕರನ್ನು ಸುಲಿಯುತ್ತಿದ್ದಾರೆ ಎನ್ನಲಾಗುತ್ತಿರುವ ಜೆಸ್ಕಾಂ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಹ ಅವರು ಒತ್ತಾಯಿಸಿದರು.
ಯಾಳವಾರ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಪಟೇಲ್ ಯಾಳವಾರ, ಜೇವರ್ಗಿ-ಯಡ್ರಾಮಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕರಾದ ಬಾಬು ಬಿ.ಪಾಟೀಲ್, ರಾಜಾ ಪಟೇಲ್ ಯಾಳವಾರ, ಸಿಪಿಐ ಜೇವರ್ಗಿ ತಾಲೂಕು ಕಾರ್ಯದರ್ಶಿ ಮಹ್ಮದ್ ಚೌಧರಿ, ಚಿಗರತಳ್ಳಿ ಗ್ರಾಮದ ಮುಖಂಡ ಅಖಿಲ್ ಪಾಶಾ ಜಾಗಿರ್‍ದಾರ್, ಗ್ರಾಮ ಪಂಚಾಯಿತಿ ಸದಸ್ಯ ಸದ್ದಾಂ ಪಟೇಲ್ ಚಿಗರತಳ್ಳಿ ಹಾಗೂ ಗ್ರಾಮ ಶಾಖಾ ಕಾರ್ಯದರ್ಶಿ ಖಾಜಾ ಪಟೇಲ್ ಇದ್ದರು.
ಸಬ್ ಸ್ಟೇಷನ್ ಆರಂಭಿಸಲು ಒತ್ತಾಯ
ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಿಗೆ ತಡೆರಹಿತ ವಿದ್ಯುತ್ ಪೂರೈಕೆಗೆ ಪೂರಕವಾಗಿ ಚಿಗರಳ್ಳಿ ಹಾಗೂ ಯಾಳವಾರ ಮಧ್ಯೆ ಆರಂಭಿಸಲು ಉದ್ದೇಶಿಸಿರುವ ವಿದ್ಯುತ್ ಸಬ್ ಸ್ಟೇಷನ್ ಕೂಡಲೇ ಆರಂಭಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶ್ ಕುಮಾರ ರಾಠೋಡ್ ಒತ್ತಾಯಿಸಿದರು.
ಈಗಾಗಲೇ ಸಬ್ ಸ್ಟೇಷನ್ ಆರಂಭದ ಉದ್ದೇಶಕ್ಕಾಗಿ ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ಉದ್ದೇಶಕ್ಕೆ ಅಗತ್ಯವಿರುವ ಹಣಕಾಸು ಮೀಸರಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಬ್ ಸ್ಟೇಷನ್ ಸ್ಥಾಪನೆ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.





























