ತೆಂಗಳಿ ಗ್ರಾ.ಪಂ.ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ

ಚಿತ್ತಾಪುರ,ನ.7- ಕಾಳಗಿ ತಾಲೂಕಿನ ತೆಂಗಳಿ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಶರ್ಮಾ ಹಾಗೂ ಅಧ್ಯಕ್ಷೆ ಗುಂಡಿಬಾಯಿ ರಾಠೋಡ ಇವರು ಸರ್ಕಾರದ ವಿವಿಧ ಯೋಜನೆಗಳಾದ 15ನೇ ಹಣಕಾಸು ಯೋಜನೆ, ಕರ ವಸೂಲಿ, ಗಾಂಧಿ ಗ್ರಾಮ ಪುರಸ್ಕಾರ, ಅಂಗವಿಕಲರಿಗೆ ಕಲ್ಯಾಣಕ್ಕಾಗಿ ವಿಸಲಿಟ್ಟ ಅನುದಾನ, ಅಮಾನತ್ತಾದ ಬಿಲ್ಲ ಕಲೆಕ್ಟರ್ ಮಲ್ಲಿಕಾರ್ಜುನ ತಳವಾರ ಇವರನ್ನು ಅಕ್ರಮವಾಗಿ ಮರು ನೇಮಕಾತಿ, ಹೀಗೆ ಹಲವು ಯೋಜನೆಗಳಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿ ಸುಮಾರು 20 ಲಕ್ಷ ಅನುದಾನ ದುರ್ಬಳಕೆ ಮಾಡಿಕೊಂಡಿದಲ್ಲದೆ ಟೆಂಗಳಿ ಗ್ರಾಮದ ವಾರ್ಡ ನಂ. 1 ರಲ್ಲಿ ಬರುವ ಗಂಗಾ ನಗರದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ಬ್ಲಿಚಿಂಗ್ ಪೌಡರ್, ಮಹಿಳಾ ಶೌಚಾಲಯ ದುರಸ್ತಿ ಹೀಗೆ ಹಲವಾರು ಕೆಲಸಗಳನ್ನು ಮಾಡದೇ ಗಂಗಾ ನಗರದ ಹೆಸರಿನ ಮೇಲೆ ವಿವಿಧ ಏಜೆನ್ಸಿಗಳಿಗೆ ಖರ್ಚು ಹಾಕುವ ಮುಖಾಂತರ ಭ್ರಷ್ಟಚಾರ ಎಸಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮಪಂಚಾಯಿತಿಗೆ ಬೀಗ ಜಡಿದು ಪ್ರತಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಗ್ರಾಮಸ್ಥರಾದ ವಿಜಯಕುಮಾರ ಟುಮಕನ್, ಮಲ್ಲಿಕಾರ್ಜುನ ಕೇಶ್ವರ್ ಮಾತನಾಡಿದರು.
ಈ ಖರ್ಚುಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿದಾಗ ಸೂಕ್ತ ದಾಖಲೆ ಕೊಡದೆ ಹಾರಿಕೆ ಉತ್ತರ ಕೊಟ್ಟಿರುತ್ತಾರೆ. ಇದನ್ನು ಮನಗೊಂಡು ಜನರು ರೊಚ್ಚಿಗೆದ್ದಾಗ ದಿನಾಂಕ: 17-09-2025 ರಂದು ಬೆಳಿಗ್ಗೆ 9.00 ಗಂಟೆಗೆ ಗಂಗಾ ನಗರದ ನಿವಾಸಿಗಳು ಸ್ಥಳದಲ್ಲಿಯೇ ಅಧಿಕಾರಿಗೆ ಗೇರಾವ ಹಾಕಿದಾಗ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಶರ್ಮಾ ಇವರು ತಮ್ಮ ತಪ್ಪನ್ನು ಒಪ್ಪಿಕೊಂಡು ನಾನು ಮೂಲಭೂತ ಸೌಲಭ್ಯಗಳನ್ನು ಆದಷ್ಟು ಬೇಗನೆ ಮಾಡಿಕೊಡುತ್ತೇನೆ. ಒಂದು ವೇಳೆ ನಾನು ಮಾಡದೆ ಹೋದರೆ ನನ್ನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು ಮತ್ತು ಗ್ರಾಮ ಪಂಚಾಯಿತಿಗೆ ಬೀಗ ಮುದ್ರೆ ಹಾಕಿರಿ ನಮ್ಮದು ಯಾವುದೇ ತಕರಾರು ಇರುವುದಿಲ್ಲ ಎಂದು ಒಪ್ಪಿಗೆ ಪತ್ರ ಬರೆದುಕೊಟ್ಟಿರುತ್ತಾರೆ. ಇಲ್ಲಿಯವರೆಗೆ ಯಾವುದೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಆದ್ದರಿಂದ ಪಂಚಾಯತ್ ಕಾರ್ಯಾಲಯಕ್ಕೆ ಬೀಗಮುದ್ರೆ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ತಿಳಸಿದರು.