ಕಲಬುರಗಿ,ಸೆ.10-ಜಿಲ್ಲೆಯ ಆಳಂದ ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ನಡೆದ ಎಮ್ಮೆ ಮತ್ತು ಆಕಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಬಂಧಿಸಿರುವ ಆಳಂದ ಪೊಲೀಸರು 4.90 ಲಕ್ಷ ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ತಡಕಲ್ ಗ್ರಾಮದಲ್ಲಿ ನಡೆದ ಎಮ್ಮೆ ಮತ್ತು ಆಕಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕ ಮಂಠಾಳೆ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಆಳಂದ ಡಿಎಸ್‍ಪಿ ತಮ್ಮಾರಾಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಆಳಂದ ಪೊಲೀಸ್ ಠಾಣೆ ಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‍ಐ ಸಂಜೀವ, ಸಿಬ್ಬಂದಿಗಳಾದ ಮೆಹಬೂಬ್ ಶೇಖ್, ಚಂದ್ರಶೇಖರ್, ಗಣಪತರಾವ, ಸಚಿನ್, ಜಾಕೀರ್, ವೆಂಕಟರಾವ, ಸಿದ್ದರಾಮ ಮತ್ತು ಮೌಲಾಲಿ ಅವರು ತನಿಖೆ ನಡೆಸಿ 8 ಜನ ಆರೋಪಿಗಳನ್ನು ಬಂಧಿಸಿ 25 ಸಾವಿರ ರೂ.ನಗದು, 1.10 ಲಕ್ಷ ರೂ.ಮೌಲ್ಯದ ಎರಡು ಎಮ್ಮೆಗಳು, 55 ಸಾವಿರ ರೂ.ಮೌಲ್ಯದ ಒಂದು ಆಕಳು, ಕೃತ್ಯಕ್ಕೆ ಬಳಸಿದ 3 ಲಕ್ಷ ರೂ.ಮೌಲ್ಯದ ಗೂಡ್ಸ್ ವಾಹನ ಸೇರಿ 4.90 ಲಕ್ಷ ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಳಂದ ಪೊಲೀಸರ ಕರ್ತವ್ಯಕ್ಕೆ ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

























