೧.೧೬ ಕೋಟಿ ಮೌಲ್ಯದ ಮಾಲು ವಶ, ಇಬ್ಬರ ಬಂಧನ

ಹೆಬ್ಬಗೋಡಿ ಪೊಲೀಸ್ ಠಾಣೆ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ೧.೧೬ ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್‌ರವರು ಪರಿಶೀಲನೆ ನಡೆಸಿದರು.

ಬೆಂಗಳೂರು,ಡಿ.೩-ಪರಿಚಯಸ್ಥ ಉದ್ಯಮಿ ಮನೆಗೆ ಸಂಚು ರೂಪಿಸಿ ಹೆಲ್ಮೆಟ್ ಧರಿಸಿ ಮೊಬೈಲ್ ಬಳಸದೇ ನುಗ್ಗಿ ಕನ್ನಕಳವು ಮಾಡಿದ್ದ ಬಟ್ಟೆ ವ್ಯಾಪಾರಿ ಸೇರಿ ಇಬ್ಬರನ್ನು ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ೧ ಕೋಟಿ ೧೪ ಲಕ್ಷ ನಗದು ಸೇರಿ ೧.೧೬ ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ
ಸುಂಕದಕಟ್ಟೆಯ ವಿಘ್ನೇಶ್ವರ ನಗರದ ಶ್ರೀನಿವಾಸಮೂರ್ತಿ ಹೆಚ್.ಕೆ(೩೯)
ಹಾಗೂ ಆತನ ಸ್ನೇಹಿತ ನೈಸ್ ಕಂಪನಿಯಲ್ಲಿ ಎಲೆಕ್ಟ್ರಷನ್ ಆಗಿದ್ದ ಚಿಕ್ಕಗೊಲ್ಲರಹಟ್ಟಿಯ ಕಾಚೋಹಳ್ಳಿ ಕ್ರಾಸ್ ನವಅರುಣ್ ಕುಮಾರ್ ಬಿ.ಎನ್ (೩೯) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ತರಕಾರಿ ವ್ಯಾಪಾರ ಜೊತೆಗೆ ವಾಹನಗಳ ಪೇಟಿಂಗ್ ಉದ್ಯಮ ನಡೆಸುತ್ತಿದ್ದ ಜಿಗಣಿ ಹೋಬಳಿಯ ಹುಲಿಮಂಗಲದ ಗೌಂಡ್ ಎಲಿಗೆನ್ಸ್ ಅಪಾರ್ಟಮೆಂಟ್ ನವಾಸಿ
ಸುನೀಲ್ ಕುಮಾರ್ ಅವರು ಕಳೆದ ನ.೮ ರಂದು ಕುಟುಂಬ ಸಮೇತ ಸ್ವಂತ ಊರಾದ ಕೋಲಾರಕ್ಕೆ ಹೋಗಿದ್ದಾಗ ಆರೋಪಿಗಳು ಹೊಂಚು ಹಾಕಿ ಕಳವು ಮಾಡಿದ್ದರು.
ಈ ಸಂಬಂಧ ದೂರು ದಾಖಲಿಸಿ
ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡ ಹೆಬ್ಬಗೋಡಿ ಪೊಲೀಸರ ವಿಶೇಷ ತಂಡವು ಕಳೆದ ನ.೧೯ ರಂದು ನಾಯಂಡಹಳ್ಳಿ ಸರ್ಕಲ್ ಬಳಿ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.


ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಹಣದ ಪೈಕಿ ಸ್ವಲ್ಪ ನಗದನ್ನು ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಆರೋಪಿಯೊರ್ವನ ವಾಸದ ಮನೆಯಲ್ಲಿ, ಸ್ವಲ್ಪ ನಗದನ್ನು ಮತ್ತೋರ್ವ ಆರೋಪಿಯ ಚಿಕ್ಕಪೇಟೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಮತ್ತು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಾಗಿ ಹಾಗೂ ಸ್ವಲ್ಪ ನಗದನ್ನು ಜಿಗಣಿಯಲ್ಲಿ ವಾಸವಿರುವ ಆತನ ಸ್ನೇಹಿತೆಗೆ ನೀಡಿರುವುದಾಗಿ ತಿಳಿಸಿರುತ್ತಾರೆ. ಹಾಗೂ ಸ್ನೇಹಿತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು.


ಅದರಂತೆ ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಆರೋಪಿಯೊರ್ವನ ವಾಸದ ಮನೆಯಲ್ಲಿ ? ೯೩ ಲಕ್ಷ ನಗದು, ೧೬ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಮಾರುತಿ ಸುಜುಕಿ ೮೦೦ ಕಾರು ಮತ್ತೋರ್ವ ಆರೋಪಿಯ ಚಿಕ್ಕಪೇಟೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ೭ ಲಕ್ಷ ನಗದು ಮತ್ತು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ ೭ ಲಕ್ಷ ನಗದು ಮತ್ತು ಜಿಗಣಿಯಲ್ಲಿ ವಾಸವಿರುವ ಆತನ ಸ್ನೇಹಿತೆಗೆ ನೀಡಿದ್ದ ೭ ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.


ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ೧ ಕೋಟಿ ೧೪ ಲಕ್ಷ ನಗದು, ೧೬ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಮಾರುತಿ ಸುಜುಕಿ ೮೦೦ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.


ಆರೋಪಿಗಳು ವ್ಯವಹಾರದಲ್ಲಿ ನಷ್ಟ ಮಾಡಿಕೊಂಡು ಅವರಿವರ ಬಳಿ ಮಾಡಿದ ಸಾಲ ತೀರಿಸಲು ನಾಲ್ಕೈದು ವರ್ಷಗಳ ಹಿಂದೆ ಪರಿಚಯಸ್ಥರಾಗಿದ್ದ ಶ್ರೀನಿವಾಸಮೂರ್ತಿ ಮನೆಯಲ್ಲಿ ಹಣ ಇರುವುದನ್ನು ತಿಳಿದುಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಯೂ ಟ್ಯೂಬ್ ನೋಡಿ ವೃತ್ತಿಪರರಂತೆ ಇದೇ ಮೊದಲ ಬಾರಿಗೆ ಕಳವು ಮಾಡಿದ್ದರು ಎಂದು ತಿಳಿಸಿದರು.


ಹೆಬ್ಬಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ಸೋಮಶೇಖರ್ ಜಿ ಮತ್ತವರ ತಂಡವು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.