
ಯಾದಗಿರಿ: ವಿಕಲಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು, ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಲು ಉತ್ತೇಜನ ನೀಡುವ ಉದ್ದೇಶದಿಂದ ಸೆಲ್ಕೋ ಫೌಂಡೇಶನ್ ವತಿಯಿಂದ ‘ಸ್ವಾವಲಂಬಿ ಬದುಕಿನತ್ತ – ವಿಕಲಚೇತನರ ಜೀವನೋಪಾಯ ಮತ್ತು ಉದ್ಯಮಶೀಲತೆಯ ಮಾರ್ಗಗಳು’ ಎಂಬ ವಿಶೇಷ ಕಾರ್ಯಕ್ರಮವನ್ನು ಅ. ೨೮ರಂದು ಆಯೋಜಿಸಲಾಗಿದೆ ಎಂದು ಸೆಲ್ಕೋ ಫೌಂಡೇಶನ್ ಹಿರಿಯ ಯೋಜನಾ ವ್ಯವಸ್ಥಾಪಕ ಪಣೀಂದ್ರ ಸಿಂಗ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಕಾರದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ವಿಶೇಷ ಭಾಷಣ ಮಾಡಲಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಸ್. ಕೊಡ್ಲಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಸಂಯೋಜಕ ಬಿ.ಸಿ. ನರಸಿಂಹಮೂರ್ತಿ ಅವರು ವಿಕಲಚೇತನರಿಗೆ ಲಭ್ಯವಿರುವ ಜೀವನೋಪಾಯದ ಅವಕಾಶಗಳ ಕುರಿತು ಮಾತನಾಡಲಿದ್ದಾರೆ ಎಂದರು.
ವಿಕಲಚೇತನರಲ್ಲಿ ಸಾಕಷ್ಟು ಕೌಶಲ್ಯ, ಸಾಮರ್ಥ್ಯ ಹಾಗೂ ಉದ್ಯಮಶೀಲತೆಯ ಆಸಕ್ತಿ ಇದ್ದರೂ ಸೂಕ್ತ ಯಂತ್ರೋಪಕರಣಗಳು, ಹಣಕಾಸಿನ ನೆರವು, ಮಾರುಕಟ್ಟೆ ಸಂಪರ್ಕ ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕೊರತೆಯಿಂದ ಅನೇಕರು ಸ್ವಂತ ಉದ್ಯಮ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಅಂತರವನ್ನು ಕಡಿಮೆ ಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಅನುಕೂಲವಾಗುವ ಜೀವನೋಪಾಯ ಚಟುವಟಿಕೆಗಳು, ಸೌರಶಕ್ತಿ ಆಧಾರಿತ ಉಪಕರಣಗಳು, ಸ್ವಯಂ ಉದ್ಯೋಗದ ಅವಕಾಶಗಳು ಹಾಗೂ ಸಣ್ಣ ಉದ್ಯಮಗಳ ಆರಂಭದ ಕುರಿತು ಮಾಹಿತಿ ನೀಡಲಾಗುವುದು. ಹೊಲಿಗೆ ಘಟಕಗಳು, ಆಹಾರ ಸಂಸ್ಕರಣೆ, ರೊಟ್ಟಿ ತಯಾರಿಕೆ, ಸಣ್ಣ ವ್ಯಾಪಾರ ಸೇರಿದಂತೆ ವಿವಿಧ ಉದ್ಯಮಗಳಿಗೆ ಸೂಕ್ತವಾದ ತಂತ್ರಜ್ಞಾನ ಪರಿಹಾರಗಳನ್ನು ಪರಿಚಯಿಸಲಾಗುವುದು ಎಂದರು.
ಸAಬAಧಪಟ್ಟ ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಪಿಎಂಎಫ್ಎAಇ (Pಒಈಒಇ), ಮುದ್ರಾ ಸಾಲ ಮತ್ತು ಪಿಎಂಇಜಿಪಿ (PಒಇಉP) ಸೇರಿದಂತೆ ವಿವಿಧ ಯೋಜನೆಗಳ ಮೂಲಕ ವಿಕಲಚೇತನರಿಗೆ ದೊರೆಯಬಹುದಾದ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ನೆರವಿನ ಕುರಿತು ಅರಿವು ಮೂಡಿಸಲಾಗುವುದು. ಅರ್ಹತೆ ಮತ್ತು ಯೋಜನೆಗಳ ನಿಯಮಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ಪಡೆಯಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ವಿಕಲಚೇತನರು ಸಮಾಜದಲ್ಲಿ ಗೌರವಯುತವಾಗಿ ಬದುಕುವುದರ ಜೊತೆಗೆ ಆರ್ಥಿಕವಾಗಿ ಸ್ವತಂತ್ರರಾಗಿ ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಿ ಸ್ವಾವಲಂಬಿಗಳಾಗಬೇಕು ಎಂಬ ಆಶಯವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೆಲ್ಕೋ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕ ಪ್ರತಾಪಜೀ ಹಾಗೂ ಯೋಜನಾ ವ್ಯವಸ್ಥಾಪಕ ನವೀನ್ ಬೋರೆಡ್ಡಿ ಉಪಸ್ಥಿತರಿದ್ದರು.






















