ಜವಾಬ್ಧಾರಿ ನೆನಪಿಸಿಕೊಂಡ ಪ್ರಿಯಾಂಕ್: ಅಶೋಕ್ ವ್ಯಂಗ್ಯ

ಬೆಂಗಳೂರು, ನ. ೪- ಸದಾ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದ ಸಚಿವ ಪ್ರಿಯಾಂಕ ಖರ್ಗೆಯವರು ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸುವ ಮೂಲಕ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದು ಸಂತೋಷ ಎಂದು ಪ್ರತಿಪಕ್ಷ ಆರ್. ಅಶೋಕ್ ವ್ಯಂಗ್ಯವಾಡಿ, ಟೆಕ್ ಸಮ್ಮಿಟ್‌ಗೆ ಆಗಮಿಸುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ರಸ್ತೆ ಗುಂಡಿ, ಹೊಂಡ, ಕಸದಿಂದ ತುಂಬಿದೆ. ಇದನ್ನು ಸರಿಪಡಿಸಲು ಮನವಿ ಮಾಡುವಿರಾ ಪ್ರಿಯಾಂಕ ಖರ್ಗೆಯವರೇ ಎಂದು ಪ್ರಶ್ನಿಸಿದ್ದಾರೆ.


ಬೆಂಗಳೂರು ಶೃಂಗ ಸಭೆಗೆ ಆಯೋಜಿಸುವ ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎಂಬುದೇ ಜನರ ನಿರೀಕ್ಷೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯವನ್ನು ಹಾಳು ಮಾಡಿದೆ. ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದೆ. ಹೂಡಿಕೆದಾರರನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹೆದರಿಸಿ, ಬೆದರಿಸಿ ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ ಜಾಗತಿಕ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ ಎಂದು ಅವರು ಟೀಕಿಸಿದ್ದಾರೆ.


ಬೆಂಗಳೂರು ಟೆಕ್ ಶೃಂಗಸಭೆ ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಸರ್ಕಾರ ಗ್ಯಾರಂಟಿ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.


ಕಲ್ಯಾಣ ಕರ್ನಾಟಕದ ೩೮ ಹಳ್ಳಿಗಳಿಗೆ ಬಸ್ಸೇ ಇಲ್ಲ


ಕಲ್ಯಾಣ ಕರ್ನಾಟಕದ ೩೮ ಹಳ್ಳಿಗಳಲ್ಲಿ ರಸ್ತೆ ಇಲ್ಲದೆ ಬಸ್‌ಗಳು ಓಡಾಡದೇ ಶಕ್ತಿ ಯೋಜನೆ ನಿರುಪಯುಕ್ತವಾಗಿರುವ ಬಗ್ಗೆಯೂ ಎಕ್ಸ್‌ನಲ್ಲಿ ಪ್ರಸ್ತಾಪಿಸಿರುವ ಆರ್ ಅಶೋಕ್, ವಿದೇಶಾಂಗ ನೀತಿಯಿಂದ ಹಿಡಿದು ಮಿಲಟರಿ ತಂತ್ರಗಾರಿಗೆವರೆಗೆ ಎಲ್ಲದರ ಬಗ್ಗೆ ಉದ್ದುದ್ದ ಬೊಗಳೆ ಭಾಷಣ ಬಿಗಿಯುವ ಪ್ರಿಯಾಂಕ ಖರ್ಗೆ ಅವರೇ ತಮಗೆ ಕಲ್ಯಾಣ ಕರ್ನಾಟಕದ ಹಳ್ಳಿಗಳ ಜನ ಬಸ್ಸಿಲ್ಲದೆ ದುಪ್ಪಟ್ಟು ಬೆಲೆ ತೆತ್ತು ಸ್ವಂತ ಗಾಡಿ, ಟಂಟಂ ಜೀಪ್‌ನಲ್ಲಿ ಪ್ರಯಾಣ ಮಾಡುತ್ತಿರುವುದು ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.


ಕಲ್ಯಾಣ ಕರ್ನಾಟಕದ ೩೮ ಗ್ರಾಮಗಳಲ್ಲಿ ಯೋಗ್ಯ ರಸ್ತೆ ಇಲ್ಲದೆ ಬಸ್‌ಗಳೇ ಇಲ್ಲ. ಕಲ್ಯಾಣ ಕರ್ನಾಟಕದ ಜನರ ಮತ ಪಡೆದು ಅಧಿಕಾರ ಅನುಭವಿಸಿ ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಂಡಿರುವುದೇ ನಿಮ್ಮ ಏಕೈಕ ಸಾಧನೆ ಎಂದು ಅಶೋಕ್ ಪ್ರಿಯಾಂಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಆರ್‌ಎಸ್‌ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ನಿಮ್ಮ ವೈಫಲ್ಯಗಳನ್ನು ಮರೆ ಮಾಚಬಹುದು. ಜನರನ್ನು ಯಾಮಾರಿಸಬಹುದು ಎಂದು ಕನಸು ಕಾಣಬೇಡಿ. ಕಲ್ಯಾಣ ಕರ್ನಾಟಕದ ಜನ ಖರ್ಗೆ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡುವ ದಿನ ದೂರವಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ.