ಜಿಲ್ಲೆಯ ಸಮಸ್ಯೆ ಬಿಟ್ಟು ಬರೀ ಮೋದಿ ವಿರುದ್ಧ ಮಾತನಾಡುವ ಪ್ರಿಯಾಂಕ್ ಖರ್ಗೆ: ಚಲುವಾದಿ ನಾರಾಯಣಸ್ವಾಮಿ

ಕಲಬುರಗಿ,ಮೇ.22-ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿನ ಸಮಸ್ಯೆಗಳ ವಿಚಾರ ಬಿಟ್ಟು, ಬರೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೇ ಮಾತನಾಡುತ್ತಾರೆ. ಪ್ರಧಾನಿಗಳ ಬಗ್ಗೆ ನೀವೇಷ್ಟೇ ಮಾತನಾಡಿದರು, ನರಿ ಮಾತನ್ನು ಗಿರಿ ಯಾವತ್ತೂ ಕೇಳಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವುದು ಬಿಟ್ಟು, ನಿಮ್ಮ ಜಿಲ್ಲೆಯಲ್ಲಿನ ಸಮಸ್ಯೆಗಳ ಕುರಿತು ಮೊದಲು ಮಾತನಾಡಿ. ಪ್ರಧಾನಿ ಮೋದಿ ಅವರ ಬಗ್ಗೆ ಹೇಳಿಕೆ ನೀಡಿದರೆ, ಅದು ನಾಯಿ ಬೊಗಳಿದಂತೆ ಆಗಲಿದೆ. ನೀವು ಎಷ್ಟು ಬೇಕಾದರೂ ಮಾತಾಡಿಕೊಳ್ಳಿ ದೇವಲೋಕ ಏನು ಹಾಳಾಗಲ್ಲ ಎನ್ನುತ್ತಲೇ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿ ಮಾತನಾಡಿದರು.
ಇನ್ನೂ, ಪಾಕ್ ಉಗ್ರರು ಧರ್ಮ ಕೇಳಿ ಅಮಾಯಕ ಭಾರತೀಯರನ್ನು ಹೊಡೆದಿದ್ದಾರೆ. ಇದರ ಬಗ್ಗೆ ಮಾತನಾಡುವುದು ಬಿಟ್ಟು, ಎಷ್ಟು ಫ್ಲೈಟ್, ವಿಮಾನ, ಮಿಸೈಲ್ ಹೋಗಿವೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಕೇಳುತ್ತಾರೆ. ನಮ್ಮ ಎಷ್ಟು ವಿಮಾನಗಳನ್ನು ಪಾಕಿಸ್ತಾನ ಉಳಿಸಿದೆ ಎಂದು ರಾಹುಲ್ ಗಾಂದಿ ಅವರು ಕೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಾಕಿಸ್ತಾನ ನಮ್ಮ ಪಾಕಿಸ್ತಾನ ಎಂದು ಭಾಷಣದೂದ್ದಕ್ಕೂ ಸಂಬೋದಿಸುತ್ತಾರೆ. ಹಾಗಾದರೆ ಕಾಂಗ್ರೆಸ್ನವರು ಯಾರ ಪರ ಭಾರತಕ್ಕೋ ಅಥವಾ ಪಾಕಿಸ್ತಾನಕ್ಕೋ ಎಂದು ನಿರ್ಧಾರ ಮಾಡಲಿ ಎಂದರು.
ನಿಮ್ಮ ಕಾಲದಲ್ಲಿ ಏಕೆ ಜಾತಿ ಗಣತಿ ಮಾಡಿಲ್ಲ. ಈಗ ಏಕೆ ಜಾತಿ ಗಣತಿ ಬೇಕು ಎನ್ನುತ್ತಿದ್ದೀರಿ ? ದೇಶದಲ್ಲಿ ಜನರ ಮಧ್ಯ ಜಾತಿಗಳ ನಡುವೆ ಜಗಳ ತಂದಿಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಒಳಮೀಸಲಾತಿ ಮಾಡಲು ಈಗ ಆದೇಶ ನೀಡಿದ್ದೀರಿ. ಅದು ಗೊಂದಲಕ್ಕೆ ಕಾರಣವಾಗಿದೆ. ಬೇಡ ಜಂಗಮ, ಬುಡ್ಗ ಜಂಗಮರ ಸಂಖ್ಯೆ 500 ರಿಂದ 5 ಲಕ್ಷ ಆಗಿದೆ ಎಂದು ವರದಿ ನೀಡಲಾಗಿದ್ದು ಸಹ ಗೊಂದಲ ಉಂಟು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿ, ಅದರ ಬಗ್ಗೆಯೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ, ನಿಮ್ಮ ಮುಳಬಾಗಿಲು ಶಾಸಕ ಕಟ್ಟೂರು ಮಂಜುನಾಥ್ ಬುಡ್ಗ ಜಂಗಮ ಪ್ರಮಾಣ ಪತ್ರ ಪಡೆದಿದ್ದಾರೆ. ಕೋರ್ಟ್ ಛೀಮಾರಿ ಹಾಕಿದೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿಲ್ಲ, ಇದನ್ನು ನೋಡಿದರೆ ಕಾಂಗ್ರೆಸ್‍ಗೆ ಎರಡು ನಾಲಿಗೆ ಇದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ್ ಮತ್ತಿಮಡು, ಡಾ.ಅವಿನಾಶ್ ಜಾಧವ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಮಾಜಿ ವಿ.ಪ ಸದಸ್ಯ ಅಮರನಾಥ್ ಪಾಟೀಲ್, ಬಿಜೆಪಿ ಮಾಜಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್, ಧರ್ಮಣ್ಣ ಇಟಗಿ, ಮಹದೇವ್ ಬೆಳಮಗಿ, ನಾಗರಾಜ್ ಮಹಾಗಾಂವಕರ್ ಸೇರಿ ಅನೇಕರು ಇದ್ದರು.